ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ….
ಪುತ್ತೂರು: ವಿಜ್ಞಾನದ ತಿಳುವಳಿಕೆಯಿಂದ ನಾವು ನಿಸರ್ಗದ ಸೌಂದರ್ಯವನ್ನು ಗಮನಿಸುತ್ತೇವೆ. ಆದರೆ ಆ ಸೌಂದರ್ಯವು ಮುದುಡಿಹೋಗದಂತೆ ಎಚ್ಚರವಹಿಸುವುದೂ ಕೂಡಾ ನಮ್ಮ ಹೊಣೆಗಾರಿಕೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಡಾ.ಬಿ.ಕೆ.ಸರೋಜಿನಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲ ವಿಜ್ಞಾನ ವಿಭಾಗ ಮತ್ತು ಐಎಸ್‍ಟಿಇ ನವದೆಹಲಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳು ಮನುಕುಲದ ಏಳಿಗೆಗೆ ಸಹಕಾರಿಯಾಗಬೇಕೆ ಹೊರತು ಅಳಿವಿಗಲ್ಲ, ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ವಿಜ್ಞಾನದ ದುರುಪಯೋಗದ ಬಗ್ಗೆ ಎಲ್ಲರೂ ಚಿಂತಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಸಾಮಾಜಿಕ ಅಭಿವೃದ್ದಿಗೆ ಬೇಕಾದ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಜತೆಯಲ್ಲಿ ಮೂಲ ವಿಜ್ಞಾನದ ತತ್ವಗಳನ್ನು ಗಟ್ಟಿಗೊಳಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಮಾತನಾಡಿ ವಿಜ್ಞಾನದ ವಿಷಯದಲ್ಲಿ ಏಷ್ಯಕ್ಕೇ ಮೊದಲ ನೋಬೆಲ್ ಪ್ರಶಸ್ತಿ ಪಡೆದ ಸರ್.ಸಿ.ವಿ ರಾಮನ್ ಅವರ ವಿನೂತನ ಸಂಶೋಧನೆ ರಾಮನ್ ಎಫೆಕ್ಟ್ ನ್ನು ಜಗತ್ತಿಗೆ ಪರಿಚಯಿಸಿದ ದಿನದ ಸವಿ ನೆನಪಿಗಾಗಿ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ಮಹಾನ್ ವಿಜ್ಞಾನಿಯ ಆದರ್ಶಗಳನ್ನು ಅನುಸರಿಸುತ್ತ ಸಮಾಜಮುಖೀ ಸಂಶೋಧನೆಗಳನ್ನು ನಡೆಸಬೇಕು ಎಂದರು. ಕೇವಲ ಪರೀಕ್ಷೆಗಾಗಿ ಮಾತ್ರ ಅಭ್ಯಾಸವನ್ನು ನಡೆಸುವ ರೂಢಿಯನ್ನು ನಿಲ್ಲಿಸಬೇಕು ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಅವರ ಚಟುವಟಿಕೆಗಳಿಗೆ ಬೇಕಾದ ಅವಕಾಶವನ್ನು ಒದಗಿಸಲಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ಸಂಸ್ಥೆಯ ಮತ್ತು ಸಮಾಜದ ಉನ್ನತಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು
ವಿಜ್ಞಾನ ದಿನದ ಅಂಗವಾಗಿ ನಡೆದ ಪೆನ್ಸಿಲ್ ಸ್ಕೆಚ್ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಮಹೇಶ್.ಕೆ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ವಿದ್ಯಾರ್ಥಿಗಳಾದ ದೇವದತ್ತ ಭಟ್ ಸ್ವಾಗತಿಸಿದರು. ಸ್ವಸ್ತಿಕ್.ಕೆ.ಎಸ್ ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾಹಿತಿ ನೀಡಿದರು. ಸೋನಮ್.ಎಸ್.ಎಸ್ ವಂದಿಸಿದರು. ಸಂತೃಪ್ತಿ.ಎಸ್ ಮತ್ತು ಆಶಿಕಾ.ಡಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ದ ಸಾಗಾ ಆಫ್ ಸೈನ್ಸ್ ಎಂಡ್ ಇಂಜಿನಿಯರಿಂಗ್-ಮಲೆಕ್ಯುಲ್ಸ್ ಟೂ ಮಟೀರಿಯಲ್ಸ್ ಎನ್ನುವ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವು ನಡೆಯಿತು.