ಫಾಝಿಲ್, ಮಸೂದ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ- ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್…

ಸುಳ್ಯ: ನುಡಿದಂತೆ ನಡೆದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸರಕಾರದ ನಡೆಗೆ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರದಲ್ಲಿ ಹತ್ಯೆಯಾದಾಗ ಧರ್ಮದ ಆಧಾರದಲ್ಲಿ ರಾಜ್ಯದ ಪ್ರಜೆಗಳನ್ನು ವಿವಿಧ ಆಯಾಮಗಳಲ್ಲಿ ವಿಭಜಿಸಿ ಹಿಂದು, ಮುಸ್ಲಿಂ ಬೇಧ ಭಾವ ಮಾಡಿ ಸಮಾಜವನ್ನು ವಿಭಜಿಸಿ ಬಿಜೆಪಿ ಹಾಗು ಬಲಪಂತೀಯ ಸಂಘಟನೆಗಳು ಪುನಃ ಅಧಿಕಾರಕ್ಕೆ ಬರಬಹುದೆಂದು ಭಾವಿಸಿ ಕೋಮುವಾದಕ್ಕೆ ತುಪ್ಪ ಸುರಿದರು. ಆದರೆ ರಾಜ್ಯದ ಜನತೆ ಸಾರಾಸಗಟಾಗಿ ಅವರನ್ನು ಸೋಲಿಸುವ ಮೂಲಕ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಎತ್ತಿತೋರಿಸಿದೆ. ಕೊಲೆಗೀಡಾದ 4 ಆತ್ಮಗಳಿಗೆ ಅಗೌರವ ಮಾಡಿದ ಸರಕಾರವನ್ನು ಕಿತ್ತೆಸೆದರು, ಕೊಲೆಗೀಡಾದ ಮುಸಲ್ಮಾನರನ್ನು ತುಚ್ಚವಾಗಿ ಕಂಡ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ, ಬಿಜೆಪಿ ಸಚಿವರು, ಕೆಲವು ಪೊಲೀಸ್ ಅಧಿಕಾರಿಗಳು, ಜಿಲ್ಲೆಯ ಕೆಲವು ಅಧಿಕಾರಿಗಳು ಸೌಜನ್ಯಕ್ಕಾದರೂ ಮೃತರ ಮನೆಗೆ ಭೇಟಿ ನೀಡಿ ಸಹಾನುಭೂತಿ ಸಂತಾಪ ತಿಳಿಸಿಲ್ಲ. ಆ ನೋವು ದುಃಖ ದುಮ್ಮಾನ ಮರೆಯಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯ ಸರಕಾರ ಇಂದು ತಲಾ 25 ಲಕ್ಷ ನೀಡುವ ನಿರ್ಧಾರ ಮೃತರ ಆತ್ಮಕ್ಕೆ ಹಾಗು ಮಾನವ ಸಮುದಾಯಕ್ಕೆ ಗೌರವ ತರುವ ಕೆಲಸವನ್ನು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ್, ಸರಕಾರವನ್ನು ಕೆಪಿಸಿಸಿ ಕಾರ್ಯದರ್ಶಿ ಹಾಗು ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದಿಸಿದ್ದಾರೆ.