ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವಕ್ಕೆ ಚಾಲನೆ….
ಪುತ್ತೂರು:ನಿರತನಿರಂತ-ಬಹುವಚನಂ ಆಯೋಜನೆಯಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ 18ನೇ ವರ್ಷದ ಎರಡು ದಿನಗಳ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ-2019 ಕ್ಕೆ ಮಂಗಳವಾರ ಸಂಜೆ ಪುರಭವನದಲ್ಲಿ ಚಾಲನೆ ನೀಡಲಾಯಿತು.
ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಕಲಿಕೆ ಹೊರತುಪಡಿಸಿ ಇತರ ಚಟುವಟಿಕೆಗಳ ಕುರಿತು ಪ್ರೋತ್ಸಾಹ ನೀಡುವಲ್ಲಿ ಹೆತ್ತವರಲ್ಲಿ ತಪ್ಪು ಕಲ್ಪನೆ ಇದೆ. ಇದರಿಂದ ಹೊರಗೆ ಬಂದು ಮಕ್ಕಳಲ್ಲಿ ಹುದುಗಿರುವ ಕಲೆಯನ್ನು ಗುರುತಿಸುವಲ್ಲಿ ಪ್ರೋತ್ಸಾಹ ನೀಡಬೇಕು. ಆಗ ರಂಗಭೂಮಿಯಲ್ಲೂ ಮಕ್ಕಳಿಗೆ ಆಸಕ್ತಿ ಬೆಳೆಯಲು ಸಾಧ್ಯ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ರಂಗಭೂಮಿಯ ಬೆಳವಣಿಗೆಯಲ್ಲಿ ಹೆತ್ತವರ, ಶಿಕ್ಷಕರ, ಸಮಾಜದ ಎಲ್ಲರ ಸಹಕಾರ ಅಗತ್ಯವಿದೆ. ಮಕ್ಕಳಿಗೆ ವೇದಿಕೆ ನೀಡುವುದರಿಂದ ಅವರು ಅಂಜಿಕೆ, ಕೀಳರಿಮೆಯನ್ನು ಮರೆತು ಹೊಸ ಹೆಜ್ಜೆಯನ್ನು ಕಂಡು ಕೊಳ್ಳಲು ಸಾಧ್ಯವಿದೆ. ನಮ್ಮಲ್ಲಿರುವ ಭಯ ಅಂಜಿಕೆಯನ್ನು ರಂಗಭೂಮಿಗೆ ತೊಡೆದು ಹಾಕುವ ಶಕ್ತಿಯಿದೆ. ಈ ನಿಟ್ಟಿನಲ್ಲಿ ಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ನಿರತನಿರಂತ ಮಕ್ಕಳ ನಾಟಕ ಶಾಲೆಯ ರೂವಾರಿಯಾದ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಮಾತನಾಡಿ, ಕಳೆದ 18 ವರ್ಷಗಳಿಂದ ಒಟ್ಟು ರಂಗಭೂಮಿ ಗಮನಿಸುವ ಮಕ್ಕಳ ನಾಟಕಗಳನ್ನು ಸರಳವಾಗಿ ಪ್ರದರ್ಶಿಸುತ್ತಿದ್ದೇವೆ. ಎಲ್ಲರ ಸಹಕಾರ ನಮಗೆ ದೊರೆತಿದೆ ಎಂದರು.
ಬಹುವಚನಂನ ರೂವಾರಿಯಾದ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ. ಸ್ವಾಗತಿಸಿದರು. ನಾಟಕ ನಿರ್ದೇಶಕ, ಪತ್ರಕರ್ತ ಮೌನೇಶ್ ವಿಶ್ವಕರ್ಮ ವಂದಿಸಿದರು. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ `ಗೊರವರು-ಒಂದು ಡಾಕ್ಯೂ ಡ್ರಾಮಾ’, ಹಾಗೂ ಹಾರಾಡಿ ಶಾಲಾ ಮಕ್ಕಳಿಂದ `ಗ್ರಹಣ-ಕಂಕಣ’ ನಾಟಕಗಳು ಪ್ರದರ್ಶನಗೊಂಂಡವು. ಬುಧವಾರ ಸಂಜೆ ಶ್ರೀ ರಾಮಕೃಷ್ಣ ಪ್ರೌಢಶಾಲಾ ಮಕ್ಕಳಿಂದ `ಸತ್ಯಾರ್ಥ ಅನ್ವೇಷಣೆ’ ಹಾಗೂ ಕಿನ್ನರಮೇಳ ತುಮರಿ ತಂಡದಿಂದ `ಹೀರಾಮೋತಿ’ ನಾಟಕ ಪ್ರದರ್ಶನಗೊಂಡವು.