ಕ್ರೈಸ್ತ ಬಾಂಧವರಿಂದ ಸಂಭ್ರಮದ ಕ್ರಿಸ್ಮಸ್ ಆಚರಣೆ, ದಿವ್ಯ ಬಲಿಪೂಜೆ…
ಪುತ್ತೂರು: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಪುತ್ತೂರು ನಗರವೂ ಸೇರಿದಂತೆ ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರು ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಿದರು.
ಕ್ರಿಸ್ಮಸ್ ಹಬ್ಬವನ್ನು ಪುತ್ತೂರು ಮಾಯ್ದೆ ದೇವುಸ್ ಚರ್ಚ್, ಮರೀಲ್ ಸೇರ್ಕೆಡ್ ಹಾರ್ಟ್ ಚರ್ಚ್, ಬನ್ನೂರು ಸಂತ ಅಂತೋಣಿ ಚರ್ಚ್ ಸೇರಿದಂತೆ ತಾಲೂಕಿನ ವಿವಿಧ ಚರ್ಚ್‍ಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ಮತ್ತು ಧ್ಯಾನ ಕೂಟ, ಪ್ರಾರ್ಥನೆಗಳು ನಡೆದವು.
ಪುತ್ತೂರು ಮಾಯ್ದೆ ದೇವುಸ್ ಚರ್ಚ್‍ನಲ್ಲಿ ದಿವ್ಯ ಬಲಿಪೂಜೆಯನ್ನು ನರೆವೇರಿಸಿ ಬೈಬಲ್ ಸಂದೇಶ ನೀಡಿದ ಪಾಲೋಟಾಯ್ನ್ ಮೇಳದ ಧರ್ಮಗುರು, ಮನೆಲ ಚರ್ಚ್ ವ್ಯಾಪ್ತಿಯ ವಂ. ಜೇಕಬ್ ಆಲ್ವಾರಿಸ್ ಅವರು ಮಾನವನ ಪಾಪ ಪರಿಹಾರಕ್ಕಾಗಿ ಯೇಸು ಕ್ರಿಸ್ತರು ಮಾನವನ ರೂಪದಲ್ಲಿ ಗೋದಲಿಯಲ್ಲಿ ಜನಿಸಿದರು. ಮಾನವನ ಪಾಪವು ಯೇಸುಕ್ರಿಸ್ತರ ಜನನದ ಮೂಲಕ ಸಂಪೂರ್ಣವಾಗುತ್ತದೆ. ಪ್ರಭು ಯೇಸುಕ್ರಿಸ್ತರು ತೋರಿಸಿದ ದಯೆ, ಪ್ರೀತಿ ಮತ್ತು ಕರುಣೆಯ ಜೀವನವನ್ನು ಪ್ರತಿಯೊಬ್ಬರೂ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಗತ್ತಿನೆಲ್ಲೆಡೆ ಮಾನವೀಯತೆ ನೆಲೆಗೊಳ್ಳಲು ಸಾಧ್ಯ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಗುರು ವಂ. ಓಸ್ವಾಲ್ಡ್ ಲಸ್ರಾದೋ ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಪುತ್ತುರು ಮಾಯ್ದೇ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ವಂ. ಆಲ್ಫ್ರೆಡ್ ಜೆ. ಪಿಂಟೋ ದಾನಿಗಳಿಗೆ ಶುದ್ದೀಕರಿಸಿದ ಮೋಂಬತ್ತಿ ನೀಡಿ ಕೃತಜ್ಞತೆ ಸಲ್ಲಿಸಿದರು. ಚರ್ಚ್‍ನ ಸಹಾಯಕ ಧರ್ಮಗುರು ವಂ. ಲ್ಯಾರಿ ಪಿಂಟೋ, ಹಿರಿಯ ಧರ್ಮಗುರು ವಂ. ವಲೇರಿಯನ್ ಮಸ್ಕರೇನಸ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಬನ್ನೂರು ಸಂತ ಆಂತೋನಿ ಚರ್ಚ್‍ನಲ್ಲಿ ಧರ್ಮಗುರು ವಂ. ಪ್ರಶಾಂತ್ ಫೆರ್ನಾಂಡಿಸ್ ನೇತೃತ್ವದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ದಿಯಾಕೋನ್ ರೋಶನ್ ಲೋಬೋ ಬೈಬಲಿನ ಸಂದೇಶ ನೀಡಿ ಯೇಸು ಕ್ರಿಸ್ತರು ಗೋದಲಿಯಲ್ಲಿ ಹುಟ್ಟಿ ಬಡತನ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ನಾವೇ ಶ್ರೇಷ್ಟರು ಎಂಬ ಅಹಂಕಾರ, ಸ್ವಾರ್ಥವನ್ನು ತೊಡೆದು ಹಾಕಿ ಶುದ್ದ ನಡವಳಿಕೆಯಿಂದ ಜೀವಿಸಿದಲ್ಲಿ ದೇವರ ಆಶೀರ್ವಾದವಿರುತ್ತದೆ ಎಂದರು.
ಚರ್ಚ್ ಸ್ಯಾಕ್ರಿಸ್ಟಿಯನ್ ಜೋನ್ ಡಿಮೆಲ್ಲೋ, ಸ್ಟಾಲಿನ್ ಗೋನ್ಸಾಲ್ವಿಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಇನಾಸ್ ಗೋನ್ಸಾಲ್ವಿಸ್ ಮತ್ತಿತರರು ಉಪಸ್ಥಿತರಿದ್ದರು.
ಮರೀಲ್ ಸೇಕ್ರೆಡ್ ಹಾರ್ಟ್ ಚರ್ಚ್‍ನಲ್ಲಿ ಫರೆಂಗಿಪೇಟೆ ಮಠದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಪುಚಿನ ಮೇಳದ ಧರ್ಮಗುರು ವಂ. ಜೋಯೆಲ್ ಲೋಪೆಸ್ ದಿವ್ಯ ಬಲಿಪೂಜೆ ನೆರವೇರಿಸಿದರು. ಚರ್ಚ್‍ನ ಧರ್ಮಗುರು ವಂ. ವಲೇರಿಯನ್ ಫ್ರ್ಯಾಂಕ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪ್ರೊ. ಎಡ್ವಿನ್ ಡಿಸೋಜ, ಕಾರ್ಯದರ್ಶಿ ಲಿಗೋರಿ ಸೆರೋ, ನಿಯೋಜಿತ ಉಪಾಧ್ಯಕ್ಷೆ ಗ್ರೆಟ್ಟಾ ಮೊಂತೆರೋ ಮತ್ತಿತರರು ಉಪಸ್ಥಿತರಿದ್ದರು.
ಕ್ರಿಸ್ಮಸ್ ಹಬ್ಬದ ನಿಮಿತ್ತ ಪುತ್ತೂರು ಮಾಯ್ದೆ ದೇವುಸ್ ಚರ್ಚ್‍ನ ಕ್ರಿಸ್ಟೋಫರ್ ಎಸೋಸಿಯೇಶನ್ ವತಿಯಿಂದ `ಕ್ರಿಸ್ಮಸ್ ದಬಾಜೊ’ ಹೆಸರಿನಲ್ಲಿ ಯೇಸುಕ್ರಿಸ್ತರ ಜನ್ಮ ವೃತ್ತಾಂತ ಸಾರುವ ವಿವಿಧ ಗೋದಲಿಗಳ ರೂಪಕ, ಹಬ್ಬದ ಉಡುಗೊರೆಗಳನ್ನು ತರುವ ಸಾಂತಾಕ್ಲಾಸ್, ಕ್ರಿಸ್ಮರ್ ಮಾದರಿಗಳ ಮೆರವಣಿಗೆಯು ನಗರದ ದರ್ಬೆಯಿಂದ ಮುಖ್ಯ ರಸ್ತೆಯಲ್ಲಿ ಕಲ್ಲಾರೆ ಮೂಲಕ ಸಾಗಿ ಚರ್ಚ್ ಆವರಣದಲ್ಲಿ ಮುಕ್ತಾಯಗೊಂಡಿತು. ಬನ್ನೂರು ಸಂತ ಆಂತೋಣಿ ಚರ್ಚ್‍ನ ಮೆರವಣಿಗೆಯು ಪಡೀಲಿನಿಂದ ಆರಂಭಗೊಂಡು ಬನ್ನುರು ಚರ್ಚ್ ಆವರಣದ ತನಕ ಸಾಗಿತು.