ನರಿಕೊಂಬು ಕಲಾರಾಧನೆ-2020 …
ಬಂಟ್ವಾಳ : ಸಂಗೀತ, ಯಕ್ಷಗಾನ, ಭರತನಾಟ್ಯ ಮೊದಲಾದ ಕಲೆಗಳು ವ್ಯಕ್ತಿಯ ಬದುಕನ್ನು ಉನ್ನತೀಕರಿಸುವುದಲ್ಲದೆ ಸಮಾಜದ ಸಾಸ್ಥ್ಯವನ್ನು ಕಾಪಾಡುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಜನಸಾಮಾನ್ಯರು ಇಂತಹ ಕಲೆ, ಸಂಸ್ಕೃತಿಗಳ ಬಗ್ಗೆ ಒಲವು ಬೆಳೆಸಿಕೊಳ್ಳುವುದಲ್ಲದೆ ತಮ್ಮ ಮಕ್ಕಳಿಗೂ ಈ ಮೂಲಕ ಉತ್ತಮ ಸಂಸ್ಕಾರ ನೀಡಬೇಕು ಎಂದು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಹೇಳಿದರು.
ಅವರು ಕೀರ್ತನಾ ಸಂಗೀತ ಶಾಲೆ ಮತ್ತು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ (ರಿ.) ನರಿಕೊಂಬು ಇವುಗಳ ಜಂಟಿ ಆಶ್ರಯದಲ್ಲಿ ಜನವರಿ 18 ಮತ್ತು 19 ರಂದು ಅನ್ನಪೂರ್ಣ ಸಭಾಭವನದಲ್ಲಿ ನಡೆದ ‘ಕಲಾರಾಧನೆ 2020’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಎರಡೂ ಕೇಂದ್ರಗಳು ನರಿಕೊಂಬು ಪರಿಸರದಲ್ಲಿ ಕಲಾ ಪ್ರಸಾರಕ್ಕಾಗಿ ಸ್ತುತ್ಯರ್ಹ ಕಾರ್ಯವೆಸಗುತ್ತಿವೆ ಎಂದು ಅವರು ಪ್ರಶಂಸಿದರು. ಯಕ್ಷಗಾನ ಕಲಾಕೇಂದ್ರದ ಮಹಿಳಾ ಕಲಾವಿದರು ಅರ್ಪಿಸಿದ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಸುಬ್ರಾಯ ಹೊಳ್ಳರು ಯಕ್ಷಗಾನ ಕಲೆಯಿಂದಾಗಿ ತಾನು ನಾಡಿನ ಜನರ ಪ್ರೀತಿಗೆ ಒಳಗಾಗಿದ್ದು ಇದು ತನ್ನ ಬಾಳಿನ ಸೌಭಾಗ್ಯವೆಂದು ಹೇಳಿದರು.
ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಸಂಚಾಲಕ, ಸಾಹಿತಿ ವೇದಮೂರ್ತಿ ಜನಾರ್ಧನ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾಕೇಂದ್ರದ ಯಕ್ಷಗುರು ಶ್ರೀವತ್ಸ ಕಾರ್ಕಳ ಮತ್ತು ಸಹಗುರುವರ್ಯರಾದ ನರಸಿಂಹಮಯ್ಯ ಮತ್ತು ಕೀರ್ತನಾ ಸಂಗೀತ ಶಾಲೆಯ ಗುರುಗಳಾದ ಕೃಷ್ಣಾಚಾರ್ಯ ಮತ್ತು ರಜತ ಕೃಷ್ಣಾಚಾರ್ಯ ದಂಪತಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಕಲಾಕೇಂದ್ರದ ಅಧ್ಯಕ್ಷರಾದ ಕೃಷ್ಣರಾಜ ಭಟ್ ಕರ್ಬೆಟ್ಟು ಸ್ವಾಗತಿಸಿದರು. ಉಪಾಧ್ಯಕ್ಷ ವೆಂಕಟೇಶ ರಾವ್ , ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಭಟ್ ಟಿ, ಜತೆ ಕಾರ್ಯದರ್ಶಿ ವಾಸುದೇವ ಭಟ್, ಕೋಶಾಧಿಕಾರಿ ಯತೀಶ್ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಎಂ ರಾಮಚಂದ್ರ ರಾವ್ ನಿರೂಪಿಸಿದರು. ಶಿಕ್ಷಕಿ ಹೇಮಾ ಆರ್. ಮಯ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ದಾಮೋದರ ರಾಮಕುಂಜ ವಂದಿಸಿದರು.
ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರಸ್ತುತಿ ಮತ್ತು ಶ್ರೀವತ್ಸ ಕಾರ್ಕಳ ನಿರ್ದೇಶನದ ‘ರಾಜಸೂಯಾಧ್ವರ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ಮಹಿಳಾ ತಂಡದವರು ‘ ಧ್ರುವಚರಿತ್ರೆ’ ಎಂಬ ಯಕ್ಷಗಾನ ತಾಳಮದ್ದಳೆಯನ್ನು ಪ್ರಸ್ತುತ ಪಡಿಸಿದರು.
ಸಂಗೀತಾರಾಧನೆ : ‘ಕಲಾರಾಧನೆ-2020’ ರ ಸಂಗೀತ ಕಾರ್ಯಕ್ರಮ ಇದೇ ಸಭಾ ಭವನದಲ್ಲಿ ಜ. 19 ರಂದು ನಡೆಯಿತು. ಸಂಗೀತ ಕಲಾವಿದ ಬಿ.ಸೀತಾರಾಮ ರಾವ್ ದೀಪ ಪ್ರಜ್ವಲಿಸಿ ಸಂಗೀತಾರಾಧನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ವಾನ್ ಸಂಪಗೋಡು ಎಸ್. ವಿಘ್ನರಾಜ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಅಪರಾಹ್ನ ಕೀರ್ತನಾ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಪ್ರತಿಭಾ ಪ್ರದರ್ಶನ ನಡೆಯಿತು. ಪ್ರಾಚಾರ್ಯ ವಿದ್ವಾನ್ ಕೃಷ್ಣ ಆಚಾರ್ಯ ಸ್ವಾಗತಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.