ನವಭಾರತದ ಸಂಕಲ್ಪದ ಅಭಿವೃದ್ದಿ ಕಾರ್ಯದಲ್ಲಿ ವಿದ್ಯಾರ್ಥಿ ಸಮೂಹ ಕೈಜೋಡಿಸಬೇಕು-ಬಿ.ಎಲ್. ಸಂತೋಷ್…

ಬಂಟ್ವಾಳ : ದೇಶದ ಪ್ರಜೆಗಳನ್ನು ಸ್ವಾವಲಂಬಿ ಸಶಕ್ತರನ್ನಾಗಿಸುವ ಬದ್ಧತೆ ಹೊಂದಿರುವ ಸರಕಾರವು ನವಭಾರತದ ಸಂಕಲ್ಪವನ್ನು ಭಾರತೀಯರ ಮುಂದೆ ಇಟ್ಟಿದೆ. ವಿದ್ಯಾರ್ಥಿ ಯುವ ಸಮೂಹ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಕೈಜೋಡಿಸಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದರು.
ಅವರು ಫೆ. 17ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸಶಕ್ತ ಭಾರತ ಸದೃಢ ಹೆಜ್ಜೆಗಳು ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಆರ್ಥಿಕ ಮತ್ತು ರಕ್ಷಣೆಯ ಪಾತ್ರ ವಿಷಯದ ಕುರಿತು ಮಾತನಾಡಿದರು.
ಉಚಿತ ಕೊಡುಗೆ ವ್ಯಕ್ತಿಯನ್ನು ಪರಾವಲಂಬಿಯನ್ನಾಗಿ ಮಾಡುತ್ತದೆ. ಶಿಕ್ಷಣ ಮನುಷ್ಯನನ್ನು ಸ್ವಾವಲಂಬಿ ಆಗಿಸುವುದು. 2022ರಲ್ಲಿ ದೇಶದ ಸ್ವಾತಂತ್ರೋತ್ಸವದ ವಜ್ರಮಹೋತ್ಸವ ನಡೆಯಲಿದೆ. ಈ ಹೊತ್ತಿಗೆ ಆರ್ಥಿಕವಾಗಿ ಹಿಂದೆ ಬಿದ್ದಿರುವ ಎಲ್ಲರನ್ನೂ ಮುಂದೆ ತರುವ ಕೆಲಸಕ್ಕೆ ಬದ್ದರಾಗಬೇಕು. ವ್ಯವಸ್ಥೆಯ ಆಧಾರದಲ್ಲಿ ದೇಶ ಪ್ರಗತಿ ಸಾಧಿಸಬೇಕು. ಅಂತಹ ದಿನಗಳು ಹತ್ತಿರ ಬರುತ್ತಿವೆ ಎಂದರು. ಮಂಗಳೂರು ವಿವಿ ಪ್ರಾಧ್ಯಾಪಕ ಪಿ.ಎಲ್. ಧರ್ಮ ಸಮನ್ವಯಕಾರರಾಗಿ ಮಾತನಾಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ನಾಯಕತ್ವ ದೇಶಕ್ಕೆ ಸಿಕ್ಕಿರುವುದು ನಮ್ಮ ಭಾಗ್ಯ. ಸದೃಢ ಭಾರತದ ಹೆಜ್ಜೆಗಾಗಿ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಉತ್ತಮ ವಿಚಾರಗಳ ಚರ್ಚೆ ಆಗಬೇಕಾಗಿದೆ, ಅದು ವಿದ್ಯಾರ್ಥಿಗಳ ಮೂಲಕ ಯಶಸ್ವಿಯಾಗಿ ನಡೆಯಬೇಕು ಎಂದು ಕರೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ, ನ್ಯಾಯವಾದಿ, ಕಲಾವಿದೆ ಬೆಂಗಳೂರಿನ ಮಾಳವಿಕಾ ಅವಿನಾಶ್ ದೀಪ ಬೆಳಗಿಸಿದರು. ಬಳಿಕ ಮಾತನಾಡಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾ ಪ್ರತಿಭಟನೆಯ ಹಿಂದೆ ಕಾಂಗ್ರೆಸಿನ ವ್ಯವಸ್ಥಿತ ರಾಜಕೀಯದ ಸಂಚಿದೆ. ಮೂರು ತಿಂಗಳಿನ ಸುದೀರ್ಘ ಹೋರಾಟಕ್ಕೆ ಆರ್ಥಿಕ ಸಂಪನ್ಮೂಲ ನೀಡಿದ್ದು ಯಾರು. ಅಶಾಂತಿ ಸೃಷ್ಟಿಸುವುದು ಇದರ ಉದ್ದೇಶವಲ್ಲವೇ ಎಂದು ಪ್ರಶ್ನಿಸಿದರು.
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ದಾರ್ಶನಿಕ ಶಿಕ್ಷಣ ನೀಡುವ ವಿದ್ಯಾದೇಗುಲ. ನವಭಾರತದ ಪುನನಿರ್ಮಾಣದ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಸಂಶೋಧಕರಾಗಿ, ಸಾಹಿತಿಗಳಾಗಿ. ಸಾಧನೆಗಳನ್ನು ಮಾಡುವಲ್ಲಿ ಸಕ್ರಿಯರಾಗಿ ಎಂದು ಅಭಿಪ್ರಾಯ ನೀಡಿದರು. ಸಂಘದ ಪ್ರಚಾರಕ ಸುನಿಲ್ ಕುಲಕರ್ಣಿ ಸಮನ್ವಯಕಾರನಾಗಿ ಚರ್ಚಿಸಿದರು.
ಮೂರನೇ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಆರೋಹಿ ರಿಸರ್ಚ್ ಫೌಂಡೇಶನ್ ನಿರ್ದೇಶಕ, ವಿಮರ್ಶಕ ಎಂ.ಎಸ್.ಚೈತ್ರ ಜನಸಂಖ್ಯೆ ಲಾಭವೇ- ಅಪಾಯವೇ ಎಂಬ ವಿಷಯದ ಬಗ್ಗೆ ಮಾತನಾಡಿದರು.
ನಾಲ್ಕನೇ ವಿಚಾರಗೋಷ್ಠಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಪ್ರಾಧ್ಯಾಪಕ ಮೈಸೂರಿನ ಬಿ.ವಿ.ವಸಂತ್ ಕುಮಾರ್ ಬೌದ್ಧಿಕ ದಾಸ್ಯದಿಂದ ಮೇಲೇಳುತ್ತಿದೆಯೇ ಭಾರತ ಎಂಬ ವಿಷಯಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ campco ಅಧ್ಯಕ್ಷ ಸತೀಶ್ಚಂದ್ರ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್, ನಾರಾಯಣ ಸೋಮಾಯಾಜಿ , ವಸಂತ ಮಾಧವ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್‍ಕಟ್ಟೆ ಸ್ವಾಗತಿಸಿ, ಶಿಕ್ಷಕ ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.