ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – NAIN ಮುಖಾಂತರ ಅನುದಾನ ಮಂಜೂರು…
ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿರುವ 10 ಯೋಜನಾ ವರದಿಗೆ ಕರ್ನಾಟಕ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನಡೆಸಲ್ಪಡುವ ನ್ಯೂ ಏಜ್ ಇನ್ಕ್ಯುಬೇಶನ್ ನೆಟ್ವರ್ಕ್ (NAIN) ಮುಖಾಂತರ ಅನುದಾನ ಮಂಜೂರಾಗಿರುತ್ತದೆ.
ವಿದ್ಯಾರ್ಥಿಗಳಲ್ಲಿರುವ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಸಲುವಾಗಿ ನೈನ್ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಈ ಯೋಜನೆಯ ಪ್ರಕಾರ ಮುಂದಿನ ಮೂರು ವರ್ಷಗಳಲ್ಲಿ ಕಾಲೇಜಿಗೆ 1.2 ಕೋಟಿ ರೂಪಾಯಿ ಅನುದಾನ ದೊರೆಯಲಿದೆ. ಕರ್ನಾಟಕ ಇನ್ನೋವೇಶನ್ ಎಂಡ್ ಟೆಕ್ನಾಲಜಿ ಸೊಸೈಟಿಯು ಇದಕ್ಕೆ ಅಗತ್ಯ ಹಣಕಾಸು ಸಹಾಯವನ್ನು ಒದಗಿಸುತ್ತದೆ.
ಸ್ಥಳೀಯವಾಗಿ ಉದ್ಭವವಾಗುವ ಸಮಸ್ಯೆಗಳಿಗೆ ಸೂಕ್ತ ತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು, ಸಂಶೋಧನಾ ನಿರತರು ಮತ್ತು ಹಿರಿಯ ವಿದ್ಯಾರ್ಥಿಗಳಲ್ಲಿರುವ ಆಲೋಚನೆಗಳಿಗೆ ಮೂರ್ತ ರೂಪವನ್ನು ಕೊಟ್ಟು ಅದನ್ನೊಂದು ಉತ್ಪನ್ನವಾಗಿಸುವತ್ತ ಅವರನ್ನು ಪ್ರೇರೇಪಿಸುವುದು ಇದರ ಮೂಲ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಂದ ಸಲ್ಲಿಕೆಯಾಗುವ ಉತ್ತಮ ಯೋಜನೆಗಳನ್ನು ಪರಿಷ್ಕರಿಸಿ, ಮೌಲ್ಯೀಕರಿಸಿ ಅದೊಂದು ಉತ್ಪನ್ನವಾಗುವುದಕ್ಕೆ ಬೇಕಾದ ಪರಿಸರ ವ್ಯವಸ್ಥೆ, ಸಂಪನ್ಮೂಲಗಳು ಮತ್ತು ಬೆಂಬಲವನ್ನು ಇಲ್ಲಿ ನೀಡಲಾಗುತ್ತದೆ. ನುರಿತ ತಂತ್ರಜ್ಞರು ಇದಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ತಮ್ಮದೇ ಆದ ಸ್ಟಾರ್ಟ್‍ಅಪ್‍ಗಳನ್ನು ಮತ್ತು ಉದ್ಯಮಗಳನ್ನು ಪ್ರಾರಂಭಿಸುವುದಕ್ಕೂ ಇಲ್ಲಿ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡಲಾಗುತ್ತದೆ.
ಕಾಲೇಜಿನ ನೈನ್ ಸೆಂಟರಿನ ವ್ಯವಸ್ಥಾಪಕ ವೆಂಕಟೇಶ್, ಸಂಯೋಜಕ ಡಾ.ಶಂಕರ್ ಗೌಡ ನ್ಯಾಮಣ್ಣನವರ್ ಅವರ ಮುತುವರ್ಜಿಯಲ್ಲಿ ಕಾಲೇಜಿನ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಜನಾ ವರದಿಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.