ಜನವರಿ 21ಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ರವರ ಹುಟ್ಟು ಹಬ್ಬವನ್ನು ಆಚರಿಸಲು ನಿರ್ಧಾರ…
ಸುಳ್ಯ: ಸಾಮಾಜಿಕ,ರಾಜಕೀಯ,ಧಾರ್ಮಿಕ, ಸಹಕಾರಿ, ಶೈಕ್ಷಣಿಕ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಕ್ರಿಯಾಶೀಲರಾಗಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್ ಅವರು ಜ. 21 ರಂದು 50 ನೇ ವರ್ಷಕ್ಕೆ ಪಾದಾರ್ಪಣೆ ಗೈಯಲಿದ್ದು, ಸುವರ್ಣ ವರ್ಷದ ಸಂಭ್ರಮದ ಅಂಗವಾಗಿ ಸಾರ್ವಜನಿಕರ ನೆಲೆಯಲ್ಲಿ ಸೇವಾ ಕಾರ್ಯಗಳೊಂದಿಗೆ ಹುಟ್ಟುಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಡಿ. 28 ರಂದು ಸದಾನಂದ ಮಾವಾಜಿ ಹಾಗೂ ಕೆ.ಎಂ,ಮುಸ್ತಾಫ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತಿರ್ಮಾನಿಸಲಾಗಿದೆ.
ಟಿ.ಎಂ.ಶಾಹೀದ್ ಅವರ ಪರಿಚಯ:
ಪ್ರತಿಷ್ಠಿತ ತೆಕ್ಕಿಲ್ ಮನೆತನದ ದಿ| ತೆಕ್ಕಿಲ್ ಮಹಮ್ಮದ್ ಹಾಜಿ ಯವರ ಪುತ್ರ ಟಿ.ಎಂ.ಬಾಬಾ ಹಾಜಿ ತೆಕ್ಕಿಲ್ ಹಾಗೂ ಕ್ಯಾಲಿಕಟ್ ನ ರಾಜಕೀಯ ಮತ್ತು ಜಮಿಂದಾರ ರಾಗಿರುವ ನಾರಾನತ್ ಕುಟುಂಬದ ಆಯಿಷ ಹಜ್ಜುಮ್ಮ ರವರ ಪುತ್ರ ನಾಗಿರುವ ಟಿ.ಎಂ.ಶಾಹೀದ್ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯಕ್ಕೆ ದುಮುಕಿದವರು. 1988-89 ರಲ್ಲಿ ನೆಹರೂ ಸ್ಮಾರಕ ಕಾಲೇಜಿನ NSUI ನ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ,1989-90 ರಲ್ಲಿ NSUI ನ ಸುಳ್ಯ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ,1991-93 ರಲ್ಲಿ NSUI ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 1993-94 ರಲ್ಲಿ NSUI ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 1994-96 ರಲ್ಲಿ NSUI ನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ,1996-98 ರಲ್ಲಿ NSUI ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿರುತ್ತಾರೆ. 1998-2010 ರವರೆಗೆ ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿಯಾಗಿ, 2010-15 ವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, 2017 ರಿಂದ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ ಹಾವೇರಿ ಜಿಲ್ಲೆಯ ಹಿರೆಕ್ಕೆರೂರು ವಿಧಾನ ಸಭಾ ಕ್ಷೇತ್ರ ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
1990-91 ರಲ್ಲಿ ಸುಳ್ಯ ಪಯಸ್ವಿನಿ ಜೆಸೀಸ್ ಯುವ ವಿಭಾಗದ ಉಪಾಧ್ಯಕ್ಷರಾಗಿ,1991-92 ಮತ್ತು 1993-94 ರಲ್ಲಿ ಎರಡು ಬಾರಿ ಕೆವಿಜಿ ಕಾನೂನು ಕಾಲೇಜಿನ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸೆನೆಟ್ ಆಯ್ಕೆ ಸಮಿತಿ ಸದಸ್ಯರಾಗಿ,1994-95 ರಲ್ಲಿ ಕೆವಿಜಿ ಕಾನೂನು ಕಾಲೇಜಿನ ವಿದ್ಯಾರ್ಥಿ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿ, 19994-95 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಯೂನಿಯನ್ ನ ಉಪಾಧ್ಯಕ್ಷರಾಗಿ ಮತ್ತು 1995-2000 ರಾಜೀವ ಗಾಂಧಿ ಯುವ ಶಕ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಟಿ.ಎಂ.ಶಾಹೀದ್ ರವರು 1994 ರಲ್ಲಿ ದೆಹಲಿಯಲ್ಲಿ ನಡೆದ NSUI ನ ರಾಷ್ಟ್ರ ಸಮ್ಮೇಳನದಲ್ಲಿ ರಾಜ್ಯ ಪ್ರತಿನಿಧಿಯಾಗಿ, 1995 ರಲ್ಲಿ ದೆಹಲಿಯಲ್ಲಿ ನಡೆದ NSUI ನ ರಾಜಕೀಯ ತರಬೇತಿ ಶಿಬಿರದಲ್ಲಿ ರಾಷ್ಟ್ರೀಯ ಪ್ರತಿನಿಧಿಯಾಗಿದ್ದರು. 2000 ನೇ ಇಸವಿಯಲ್ಲಿ ಯುವ ಕಾಂಗ್ರೇಸ್ ನ ರಾಜಕೀಯ ತರಬೇತಿ ಶಿಬಿರ ಬೆಂಗಳೂರಿನಲ್ಲಿ ನಡೆದಾಗ ಶಿಬಿರದ ಯಶಸ್ವಿಗೆ ದುಡಿದಿದ್ದಾರೆ. AICC ಯ 80 ನೇ ಪೂರ್ಣ ಅಧಿವೇಶನ ಕೊಲ್ಕತ್ತಾ ದಲ್ಲಿ ನಡೆದಾಗ ರಾಜ್ಯ ಪ್ರತಿನಿಧಿಯಾಗಿ ಭಾಗವಹಿಸಿದರು.1998 ಮತ್ತು 2002 ನೇ ಇಸವಿಯಲ್ಲಿ ದೆಹಲಿಯಲ್ಲಿ ನಡೆದ AICC ಸಮ್ಮೇಳದಲ್ಲಿ ರಾಜ್ಯ ಪ್ರತಿನಿಧಿಯಾಗಿದ್ದರು.ಇವರು ಅತೀ ಚಿಕ್ಕ ವಯಸ್ಸಿನಲ್ಲಿ ಯುವ ಕಾಂಗ್ರೇಸ್ ಹಾಗೂ ಎಲ್ಲಾ ರಾಷ್ಟ್ರೀಯ ಕಾಂಗ್ರೇಸ್ ನ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ.
ಟಿ.ಎಂ.ಶಾಹೀದ್ ಅವರು ಅತೀ ಕಿರಿಯ ವಯಸ್ಸಿನಲ್ಲಿ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ನ ಅಧ್ಯಕ್ಷರಾಗಿ , ಅರಂತೋಡು ಬದ್ರೀಯಾ ಜುಮ್ಮಾ ಮಸೀದಿಯ ಪುನರ್ ರ್ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಷಿಯೇಷನ್ ಅರಂತೋಡು ಇದರ ಗೌರವ ಅಧ್ಯಕ್ಷರಾಗಿ , ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಮತ್ತು 2000 ನೇ ಇಸವಿಯಲ್ಲಿ ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ವಿವಿದ್ದೋಶ ಸಹಕಾರಿ ಸಂಘದ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ಸತತ ಏಳುವರೆ ವರ್ಷ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ನ ಸದಸ್ಯರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ನಾರು ಮಂಡಳಿ ಸದಸ್ಯರಾಗಿ ದುಡಿದಿರುವ ಶಾಹೀದ್ ಅವರು ಪ್ರಸ್ತುತ ಕರ್ನಾಟಕ ರಾಜ್ಯದ ರಾಜೀವ್ ಯೂತ್ ಪೌಂಡೇಷನ್ ನ ಅಧ್ಯಕ್ಷರಾಗಿರುತ್ತಾರೆ. 2002ರಲ್ಲಿ ರಾಜ್ಯ ಯುವ ಪ್ರಶಸ್ತಿಯನ್ನು ಪಡೆದಿರುವ ಶಾಹೀದ್ ಅವರು, ಕಬ್ಬಡ್ಡಿ ಆಟಗಾರನಾಗಿ ರಾಜ್ಯಮಟ್ಟದ ಪ್ರಾಥಮಿಕಾ ಶಾಲಾ ಮಟ್ಟದ ಕಬ್ಬಡ್ಡಿ ಕ್ರೀಡಾ ಕೂಟದಲ್ಲಿ ಭಾಗವಹಿಸಿರುತ್ತಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಟಿ.ಎಂ.ಶಾಹೀದ್ ರವರು ರಾಜ್ಯ, ದೇಶ ಹಾಗೂ ವಿದೇಶದಲ್ಲಿ ಅನೇಕ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
ಶ್ರೀಯುತರು ಪ್ರಸ್ತುತ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾಗಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. 2018 ರಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನಕ್ಕೆ ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ನೂರಾರು ಮಸೀದಿ ಮದರಸಗಳಿಗೆ ,ದೇವಸ್ಥಾನ ,ಶಿಕ್ಷಣ ಸಂಸ್ಥೆ ,ಶಾದಿ ಮಹಲ್ ಕಟ್ಟಡ ,ಯುವಕ ಮಂಡಲ, ಸೇತುವೆಗಳು, ಗ್ರಾಮೀಣ ರಸ್ತೆಗಳಿಗೆ ಕೋಟಿಗಟ್ಟಲೆ ಅನುಧಾನವನ್ನುವಿವಿಧ ಇಲಾಖೆಗಳಿಂದ ತರಿಸಿ ಕೊಟ್ಟ ಶಾಹಿದ್ ಅವರು ಜನಾನುರಾಗಿ ನಾಯಕರಾಗಿರುತ್ತಾರೆ.
ಟಿ.ಎಂ.ಶಾಹೀದ್ ಅವರ ಅನನ್ಯ ಸೇವೆಗಾಗಿ ಅವರ ಹುಟ್ಟು ಹಬ್ಬವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು . ಸಭೆಯಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಅಬ್ದುಲ್ ಮಜೀದ್, ಅಬ್ದುಲ್ ರಜಾಕ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.