ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ‘ಕಲಾ ಕದನ’ ಸಾಂಸ್ಕೃತಿಕ ಸ್ಪರ್ಧೆ….
ಪುತ್ತೂರು: ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳಲ್ಲಿ ಸಂಭ್ರಮ, ಸಡಗರ. ತಾವು ಇಷ್ಟಪಟ್ಟ ವಿಷಯಕ್ಕೆ ಸಂಬಂಧಪಟ್ಟಂತೆ ವಿಧ ವಿಧದ ಪೋಷಾಕುಗಳನ್ನು, ವೇಷ ಭೂಷಣಗಳನ್ನು ಧರಿಸಿ ಪ್ರದರ್ಶನದ ಸರತಿಗಾಗಿ ಕಾದಿರುವ ಕಲಾವಿದರು. ತಮ್ಮ ಸಹಪಾಠಿಗಳ ಕಲಾವಂತಿಗೆಗೆ ಮೆಚ್ಚುಗೆಯ ಮಾಹಾಪೂರವನ್ನೇ ಹರಿಸುತ್ತಿರುವ ವಿದ್ಯಾರ್ಥಿ ಸಮೂಹ. ಇವೆಲ್ಲ ಕಂಡುಬಂದದ್ದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ.
ಈ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ಕಲಾ ಕದನದ ಸಂದರ್ಭದಲ್ಲಿ. ಕಾಲೇಜಿನ ಭೂಮಿಕಾ ಕಲಾ ಸಂಘದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ಸಭಾಭವನದಲ್ಲಿ ಮೇಳೈಸಿದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಆರು ತಂಡಗಳು ಭಾಗವಹಿಸಿದ್ದವು. ನಿರ್ದಿಷ್ಟ ಸಮಯದಲ್ಲಿ ಅತಿ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮವನ್ನು ನೀಡುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಸೈನಿಕರ ಜೀವನ, ಭಾರತೀಯ ಸಂಸ್ಕೃತಿ, ಮಹಿಳಾ ಸಬಲೀಕರಣ, ಕಾಲೇಜು ಜೀವನ, ಅಮ್ಮ, ಭಾರತೀಯ ಹಾಗೂ ಪಾಶ್ಚಾತ್ಯ ಸಂಸ್ಕೃತಿ ಎನ್ನುವ ವಿಷಯಗಳ ಬಗ್ಗೆ ವಿನೂತನ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಭೂಮಿಕಾ ಕಲಾ ಸಂಘದ ಸಂಯೋಜಕ ಪ್ರೊ. ಸುದರ್ಶನ್ ಎಂ ಎಲ್, ಸಹ ಸಂಯೋಜಕಿ ಪ್ರೊ.ಶ್ವೇತಾಂಬಿಕಾ.ಪಿ ಅವರ ಮಾರ್ಗದರ್ಶನದಲ್ಲಿ ಪ್ರೊ.ಶ್ರೀಶರಣ್ಯ ಯು ಆರ್ ಕಾರ್ಯಕ್ರಮ ಸಂಯೋಜಿಸಿದರು. ಒಟ್ಟಿನಲ್ಲಿ ಇದು ನೂತನ ವಿದ್ಯಾರ್ಥಿಗಳ ಕಲಾಪ್ರತಿಭೆಗೊಂದು ವೇದಿಕೆಯಾದದ್ದು ಮಾತ್ರ ಸತ್ಯ.