ಬಂಟ್ವಾಳ ಜೈನ್ ಮಿಲನ್ ವತಿಯಿಂದ ವಿದ್ಯಾರ್ಥಿ ಪುರಸ್ಕಾರ….
ಬಂಟ್ವಾಳ :ಜೈನ ಸಂಪ್ರದಾಯದಲ್ಲಿ ನೋಂಪು ಆಚರಣೆಯು ಪರಿಶುದ್ಧ ಆತ್ಮದೊಂದಿಗೆ ಸಂದರ್ಶನವಾಗಿದೆ. ಅದು ಆಡಂಬರಕ್ಕಾಗಿ ಪ್ರದರ್ಶನಕ್ಕಾಗಿ ಅಲ್ಲ ಎಂದು ಮೂಡಬಿದ್ರಿ ಮಹಾವೀರ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ಎಸ್.ಪಿ. ವಿದ್ಯಾಕುಮಾರ್ ಹೇಳಿದರು.
ಅವರು ಜೈನ್ ಮಿಲನ್ ಬಂಟ್ವಾಳ ಶಾಖೆಯ ವತಿಯಿಂದ ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನಚೈತ್ಯಾಲಯದಲ್ಲಿ ಏರ್ಪಡಿಸಿದ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಜೈನ ಧರ್ಮದಲ್ಲಿ ನೋಂಪಿ ಆಚರಣೆ ಬಗ್ಗೆ ಉಪನ್ಯಾಸ ನೀಡಿದರು.
ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷ ಸುದರ್ಶನ್ ಜೈನ್ ವಿದ್ಯಾರ್ಥಿ ಪುರಸ್ಕಾರ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಂಯಮದಿಂದ ವಿದ್ಯಾರ್ಜನೆ ಮಾಡಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೈನ್ ಮಿಲನ್ ವತಿಯಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದರು.
ರಾಜವರ್ಮ ಬಲ್ಲಾಳ್ ಮತ್ತು ದಿ. ಅನಂತರಾಜ ಇಂದ್ರ ಪಾಣೆಮಂಗಳೂರು ಇವರ ಪ್ರಯೋಜಕತ್ವದಲ್ಲಿ ಪ್ರತಿಭಾವಂತ 8 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮುನಿದೀಕ್ಷೆ ಸ್ವೀಕರಿಸಲಿರುವ ಹರೀಶ್ಚಂದ್ರ ಶೆಟ್ಟಿ ಹಾಗೂ 15 ವರ್ಷಗಳಿಂದ ನೋಂಪು ಆಚರಿಸಿ ಉದ್ಯಾಪನ ಮಾಡಿದ ದೀಪಕ್ ಕುಮಾರ್ ಮತ್ತು ವಿಜಯ ಕುಮಾರಿ ಇಂದ್ರರರನ್ನು ಗೌರವಿಸಲಾಯಿತು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೈನ್ ಮಿಲನ್ ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್‍ಚಂದ್ರ ಜೈನ್ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಸ್ವಾಗತಿಸಿದರು. ಕ್ಷಮ್ಯಾ ಜೈನ್ ವಂದಿಸಿದರು. ವಕೀಲ ಶಿವಪ್ರಕಾಶ್ ನಿರೂಪಿಸಿದರು. ಮದಿಮೆತ್ತಿಮಾರು ನೇಮಿರಾಜ್ ಜೈನ್ ಮತ್ತು ನಿರೂಪ ಎಂ. ಜೈನ್ ಅತಿಥೇಯರಾಗಿ ಕಾರ್ಯಕ್ರಮ ವ್ಯವಸ್ಥೆಗೊಳಿಸಿದ್ದರು.