ಆಸ್ಪತ್ರೆಯ ಚಿಕಿತ್ಸೆಯ ಬಾಕಿ ಮೊತ್ತಕ್ಕಾಗಿ ಆರ್ಥಿಕ ಸಹಾಯ ಮಾಡಿದ ಶರೀಫ್ ಕಂಠಿ ಮತ್ತು ಮೋನಪ್ಪ ಮೇಸ್ತ್ರಿ…
ಸುಳ್ಯ : ಹುಣಸೂರು ಮೂಲದ ರಘು ಎಂಬುವವರು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ, ಹಣದ ಕೊರತೆಯಿಂದ ಆಸ್ಪತ್ರೆ ಬಿಲ್ಲು ಪಾವತಿಸಲು ಆಗದೆ ಇರುವ ಸಂದರ್ಭದಲ್ಲಿ ನ. ಪಂ. ಸದಸ್ಯ ಶರೀಫ್ ಕಂಠಿ ಮತ್ತು ಮೋನಪ್ಪ ಮೇಸ್ತ್ರಿ ಅವರು ತಮ್ಮ ಸ್ನೇಹಿತರೊಳಗೂಡಿ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕೆವಿಜಿ ಆಸ್ಪತ್ರೆಯಲ್ಲಿ ಹುಣಸೂರು ಮೂಲದ ರಘು ಎಂಬವರು ಹೊಟ್ಟೆ ಸಂಬಂಧಿತ ಕಾಯಿಲೆಯಿಂದ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಗೊಂಡ ಸಂದರ್ಭದಲ್ಲಿ ಹತ್ತು ಸಾವಿರ ರೂಪಾಯಿಗಳ ಹಣದ ಕೊರತೆಯಿಂದ ಆಸ್ಪತ್ರೆ ಬಿಲ್ಲು ಪಾವತಿಸಲು ಆಗದೆ ಐದು ದಿವಸದಿಂದ ಆಸ್ಪತ್ರೆಯಲ್ಲೇ ಉಳಿದಿದ್ದರು. ಮಾಹಿತಿ ತಿಳಿದ ಸುಳ್ಯದ ಮೋನಪ್ಪ ಮೇಸ್ತ್ರಿ ಯವರು ಸ್ನೇಹಿತ, ನ. ಪಂ. ಸದಸ್ಯ ಶರೀಫ್ ಕಂಠಿಯ ವರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಅವರು ಕೆವಿಜಿ ಆಸ್ಪತ್ರೆಗೆ ಫೋನ್ ಮೂಲಕ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆ ಮೂಲದಿಂದ ನಾವು ಚಿಕಿತ್ಸೆಯನ್ನು ಉಚಿತವಾಗಿ ನೀಡಿದ್ದೇವೆ. ಮೆಡಿಸಿನ್ , ಸ್ಕ್ಯಾನಿಂಗ್ ಚಾರ್ಜ್ ಮಾತ್ರ ಅವರು ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಶರೀಫ್ ಹಾಗು ಮೋನಪ್ಪ ರವರು ಕೆಲವು ಸ್ನೇಹಿತರನ್ನು ಭೇಟಿ ಮಾಡಿ ವಿಷಯ ತಿಳಿಸಿ ಸ್ವಲ್ಪ ಮೊತ್ತವನ್ನು ಕ್ರೂಢೀಕರಿಸಿ, ಬಿಲ್ಲನ್ನು ಪಾವತಿಸಿ ಬಾಡಿಗೆ ಕಾರ್ ಮೂಲಕ ರಘು ರವರನ್ನು ತಮ್ಮ ಊರಾದ ಹುಣಸೂರಿಗೆ ತೆರಳುವಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.