ಸುದ್ದಿ

ಬಂಟ್ವಾಳ – ಪತ್ರಿಕಾ ದಿನಾಚರಣೆ…

ಬಂಟ್ವಾಳ: ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೋಶ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾಧ್ಯಮದ ಓದು- ಕಲಿಕೆಗೆ ಹೇಗೆ ಪೂರಕ ಎಂಬ ಮಾಹಿತಿ- ಸಂವಾದ ಕಾಮಾಜೆಯಲ್ಲಿರುವ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅದರಲ್ಲೂ ದಿನಪತ್ರಿಕೆಗಳಿಗೆ ಹೆಚ್ಚಿನ ಸವಾಲು ಕಂಡುಬರುತ್ತಿದೆ. ಅವುಗಳನ್ನು ಬೆಳೆಸುವ ನಿಟ್ಟಿನಲ್ಲಿ ಜನರ ಆಲೋಚನಾ ಶಕ್ತಿ, ಅಭಿರುಚಿ ಬದಲಾದಾಗ ಅದಕ್ಕೆ ಪೂರಕವಾಗಿ ಪತ್ರಿಕೋದ್ಯಮವೂ ಬದಲಾಗುತ್ತದೆ. ಮಾಧ್ಯಮ ರಂಗವೂ ಪ್ರಜಾತಂತ್ರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ಮಾತನಾಡಿ, ಪತ್ರಿಕೋದ್ಯಮದ ಬರವಣಿಗೆಯು ಹಲವು ಸೂಕ್ಷ್ಮ ಗಳನ್ನು ಒಳಗೊಂಡಿದ್ದು, ನಿರಂತರ ಓದಿನಿಂದ ನಮ್ಮ ಬರವಣಿಗೆಯೂ ಗಟ್ಟಿಯಾಗುತ್ತಾ ಸಾಗುತ್ತದೆ. ವಿದ್ಯಾರ್ಥಿಗಳು ಓದಿನ ಕುರಿತು ವಿಶೇಷ ಆಸಕ್ತಿ ವಹಿಸಿದಾಗ ಅವರಲ್ಲಿ ಪ್ರೌಢಿಮೆ ಬೆಳೆಯುತ್ತದೆ. ಒಂದು ಬರವಣಿಗೆಯನ್ನು ಹೇಗೆ ಓದಬೇಕು ಎಂಬ ಕೌಶಲ್ಯವೂ ಅತಿ ಅಗತ್ಯವಾಗಿದೆ ಎಂದರು.
ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಕಾಶ್ಚಂದ್ರ ಶಿಶಿಲ ಅವರು ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್‌ಕುಮಾರ್ ರೈ ಉಪಸ್ಥಿತರಿದ್ದರು. ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮನೋಹರ ಪ್ರಸಾದ್ ಅವರನ್ನು ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಹರೀಶ ಮಾಂಬಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.

Advertisement

Related Articles

Back to top button