ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಭೀಕರ ಹತ್ಯೆ- ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಖಂಡನೆ…

ಸುಳ್ಯ: ಬಿಜೆಪಿ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಅವರ ಬರ್ಬರ ಹತ್ಯೆಯನ್ನು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲೆಯ ಜನ ಹಳೆಯ ಕಾಲದಲ್ಲಿ ಕೋಮು ಸೌಹಾರ್ದತೆಯಿಂದ ಇದ್ದ ದಿನಗಳನ್ನು ಮೆಲುಕು ಹಾಕಿ, ಇಂದು ದಿನೇ ದಿನೇ ಪರಸ್ಪರ ದ್ವೇಷ ಅಸೂಯೆಗಳಿಂದ ಸಮುದಾಯಗಳು ದೂರವಾಗುತ್ತಿರುವುದು, ಧಾರ್ಮಿಕ ಭಾವನೆಗಳಿಗೆ ಜನ ಬಲಿಯಾಗುತ್ತಿರುವುದು ಹಾಗೂ ಈ ರೀತಿಯಲ್ಲಿ ಹತ್ಯೆ ಆಗುತ್ತಿರುವುದು ಖೇದಕರ ಮತ್ತು ಅತ್ಯಂತ ದುಖಃ ಹಾಗೂ ಕಳವಳಕಾರಿ ವಿಷಯವಾಗಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಯ ಭೀತ ಸಮಾಜದ ಮುಂದೆ ನಮ್ಮ ದೇಶದ ಪರಿಸ್ಥಿತಿ ನೋಡಿ ಭಾರತ ಮಾತೆಯೇ ದುಃಖಿತವಾಗಿದ್ದಾಳೆ. ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಆಸ್ತಿ. ಯಾರೇ ಈ ರೀತಿ ಕೃತ್ಯ ಮಾಡುವುದು ಖಂಡನೀಯ. ಕೋಮುವಾದಿಗಳು ಸ್ವಾರ್ಥಕ್ಕಾಗಿ ಈ ರೀತಿಯ ಕೃತ್ಯವನ್ನು ಎಸಗುತಿದ್ದು ಸಮಾಜ ಒಗ್ಗಟ್ಟಾಗಿ ಇಂತಹ ಶಕ್ತಿಗಳ ವಿರುದ್ದ ಹೋರಾಡಿದಾಗ ಮಾತ್ರ ಸಮಾಜ ಘಾತಕರನ್ನು ಹದ್ದುಬಸ್ತಿನನಲ್ಲಿಡಲು ಸಾಧ್ಯ. ಮೊನ್ನೆ ಅಮಾಯಕ ಮಸೂದ್ ಎಂಬ ಯುವಕನ ಕೊಲೆ ನಮ್ಮ ಮುಂದೆ ಇದೆ. ಇಂತಹ ಸಂದರ್ಭದಲ್ಲಿ ಸರಕಾರ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖೇದಕರ . ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಸಮಾಜಕ್ಕೆ ಕಳಂಕ. ಈ ರೀತಿ ಕೃತ್ಯ ಎಸಗಿದ ಆರೋಪಿಗಳನ್ನು ಹಾಗೂ ಅದರ ಹಿಂದೆ ಇರುವ ಶಕ್ತಿಗಳನ್ನು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲು ಟಿ ಎಂ ಶಾಹೀದ್ ತೆಕ್ಕಿಲ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಬೆಳ್ಳಾರೆಯಲ್ಲಿ ನಡೆದ ಎರಡು ಕೊಲೆಯ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಸಿ ಬಿ ಐ ತನಿಖೆಗೆ ಶಿಫಾರಸ್ಸು ಮಾಡಲು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.
ಟಿ ಎಂ ಶಾಹೀದ್ ತೆಕ್ಕಿಲ್