ಕೇಂದ್ರ ಸರಕಾರದಿಂದ ಪ್ರಾಥಮಿಕ ಶಾಲಾ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಫ್ ರದ್ದು…
ಕಾಂಗ್ರೆಸ್ ಮುಖಂಡ ಟಿ.ಎಂ ಶಹೀದ್ ತೆಕ್ಕಿಲ್ ಖಂಡನೆ...
ಸುಳ್ಯ: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧ, ಪಾರ್ಸಿ, ಸಿಖ್ ಸಮುದಾಯದ ಪ್ರಿ ಮೇಟ್ರಿಕ್ (ಪ್ರಾಥಮಿಕ ಶಾಲಾ) ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ನಿಲ್ಲಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಕಟಿಸಿರುವುದನ್ನು ಕಾಂಗ್ರೆಸ್ ಮುಖಂಡ ಹಾಗು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕೆ.ಪಿ.ಸಿ.ಸಿ ಉಸ್ತುವಾರಿ ಟಿ.ಎಂ ಶಾಹಿದ್ ತೆಕ್ಕಿಲ್ ಖಂಡಿಸಿದ್ದಾರೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಲಕ್ಷಾಂತರ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಾರೆ. ಮಾನ್ಯ ಪ್ರಧಾನ ಮಂತ್ರಿಯವರು ಅಲ್ಪ ಸಂಖ್ಯಾತರು ಒಳ್ಳೆಯ ಶಿಕ್ಷಣವನ್ನು ಪಡೆದು ದೇಶದ ಮುಖ್ಯ ವಾಹಿನಿಗೆ ಬರಬೇಕು ಎಂದು ಭಾಷಣ ಮಾಡುತ್ತಾರೆ. ಮತ್ತೊಂದು ಕಡೆ ಅಲ್ಪ ಸಂಖ್ಯಾತರ ಸೌಲಭ್ಯಗಳನ್ನು ಮತ್ತು ಮೀಸಲಾತಿಗಳನ್ನು ಹಿಂಪಡೆಯುವ ಮೂಲಕ ಕೇಂದ್ರ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಮತ್ತು ಅಲ್ಪ ಸಂಖ್ಯಾತ ಸಮುದಾಯವನ್ನು ದಮನಿಸುತ್ತಿದೆ. ಹಿಜಾಬ್ ಪ್ರಕರಣದಿಂದ ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾದರು. ಇದೀಗ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಮತ್ತು ಸೌಲಭ್ಯಗಳನ್ನು ರದ್ದು ಮಾಡುವ ಮೂಲಕ ಕೇಂದ್ರ ಸರಕಾರವು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ. ಸರಕಾರವು ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗು ಪ್ರೋತ್ಸಾಹವನ್ನು ನೀಡಬೇಕು. ಅಲ್ಪ ಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಟಿ.ಎಂ ಶಹೀದ್ ತೆಕ್ಕಿಲ್ ಸರಕಾರವನ್ನು ಆಗ್ರಹಿಸಿದ್ದಾರೆ ಮತ್ತು ಕೊಡಲೇ ಆದೇಶವನ್ನು ಹಿಂಪಡೆಯಬೇಕು, ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದಿದ್ದಾರೆ.