ಧರ್ಮ ಜಾಗೃತಿಯ ಮೂಲಕ ಜಾಗೃತ ಭಾರತ ನಿರ್ಮಾಣ ಆಗಬೇಕು – ಪದ್ಮಕುಮಾರ್ ಗುಂಡಡ್ಕ…
ಸ್ವಾಮಿ ವಿವೇಕಾನಂದರ ಆದರ್ಶ ಬದುಕು ಎಲ್ಲರಿಗೂ ಸ್ಪೂರ್ತಿ - ಪ್ರವೀಣ್ ಕುಮಾರ್ ಶೆಟ್ಟಿ…
ಸುಳ್ಯ: ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಸಮಿತಿ ಆಶ್ರಯದಲ್ಲಿ ಸುಳ್ಯದ ವಿವೇಕಾನಂದ ವೃತ್ತದ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಹಾರಾರ್ಪಣೆ ಮತ್ತು ಯುವ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಜ. 12ರಂದು ನಡೆಯಿತು.
ಸುಳ್ಯದ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿಯವರು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಹಾರಾರ್ಪಣೆಗೈದು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ಬದುಕು ಎಲ್ಲರಿಗೂ ಸ್ಪೂರ್ತಿ, ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಗುಂಡಡ್ಕ ಉಪನ್ಯಾಸ ನೀಡಿ ಮಾತನಾಡುತ್ತಾ “ಯುವಕರಿಗೆ ಸ್ಫೂರ್ತಿ ತುಂಬಬಲ್ಲ ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಆಶಯದಂತೆ ಸದೃಢ ಭಾರತವನ್ನು ನಿರ್ಮಾಣ ಮಾಡಬೇಕಾದರೆ ಧಾರ್ಮಿಕ ತಳಹದಿಯ ಅಡಿಪಾಯ ಬೇಕು, ಸಾಮಾಜಿಕ ಪರಿವರ್ತನೆ ಆಗಬೇಕು. ಧರ್ಮ ಜಾಗೃತಿಯ ಮೂಲಕ ಭಾರತದ ಜಾಗೃತಿ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಸದಸ್ಯೆ ಕಿಶೋರಿ ಶೇಟ್, ಜಿಲ್ಲಾ ಅಧಿವಕ್ತ ಪರಿಷತ್ ಉಪಾಧ್ಯಕ್ಷ ಜಗದೀಶ್ ಡಿ. ಪಿ, ವರ್ತಕ ಸಂಘದ ಅಧ್ಯಕ್ಷ ಸುಧಾಕರ್ ರೈ, ಉದ್ಯಮಿ ಎಮ್. ಬಿ. ಸದಾಶಿವ, ಭಾರತೀಯ ಜನತಾ ಪಕ್ಷದ ಮುಖಂಡರುಗಳಾದ ಸುಬೋಧ್ ಶೆಟ್ಟಿ ಮೇನಾಲ, ನವೀನ್ ರೈ ಮೇನಾಲ, ನ್ಯಾಯವಾದಿ ಸಂದೀಪ್ ವಳಲಂಬೆ, ಸಮಿತಿ ಖಜಾಂಜಿ ಹೇಮಂತ್ ಕಾಮತ್ ಇನ್ನಿತರರು ಹಾಗೂ ಎಬಿವಿಪಿ ಪದಾಧಿಕಾರಿಗಳು ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ರಾಜೇಶ್ ರೈ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ನಗರ ಎಬಿವಿಪಿ ಅಧ್ಯಕ್ಷ ಕುಲದೀಪ್ ಪೆಲ್ತಡ್ಕ ವಂದಿಸಿದರು. ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.