ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ – ರಬ್ಬರ್ ಕಾರ್ಮಿಕರಿಗೆ ಬಾಕಿ ಇರುವ ಬೋನಸ್ ಬಿಡುಗಡೆಗೆ ಮನವಿ…

ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ವಿಭಾಗಗಳ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ 2021- 22ನೇ ಸಾಲಿನ ಬಾಕಿ ಇರುವ ಬೋನಸ್ ಅನ್ನು ತುರ್ತಾಗಿ ನೀಡಬೇಕೆಂಬುದಾಗಿ ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರವರಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಅವರು ಗುಣಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ತೋಟ ತೊಲಿಳಾಲರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2021-22ನೇ ಸಾಲಿಗೆ ಶೇ.20ರಷ್ಟು ಬೋನಸ್ ನೀಡುವಂತೆ ನಿಮ್ಮ ಬೇಡಿಕೆ ಇದ್ದು ಈಗಾಗಲೇ ಶೇ.8.33ರಷ್ಟನ್ನು ನೀಡಲಾಗಿದೆ ಉಳಿದಂತೆ ಬಾಕಿ ಬೋನಸ್ ಅನ್ನು ಲೆಕ್ಕ ಹಾಕಿ ಪ್ರಸ್ತುತ ನೆಡೆಯುವ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಆದಷ್ಟು ಬೇಗ ಜುಲೈ-2023ನೇ ಮಾಹೆಯಲ್ಲಿ ನೀಡುವುದಾಗಿ ವ್ಯವಸ್ಥಾಪಕ ನಿರ್ದೇಶಕರವರರು ಸ್ಪಷ್ಟಪಡಿಸಿರುತ್ತಾರೆ. ಹಾಗೂ 2022-23ನೇ ಸಾಲಿಗೂ ಕೂಡ ಶೇ.20ರಷ್ಟು ಬೋನಸ್ ಅನ್ನು ಸಕಾಲದಲ್ಲಿ ಮಂಡಳಿ ಸಭೆಗೆ ಮಂಡಿಸಿ ಮಂಜೂರಾತಿ ಪಡೆದು ವಾರ್ಷಿಕ ಸಾಮಾನ್ಯ ಸಭೆ ನೆಡೆದ ನಂತರದಲ್ಲಿ ನೀಡುವುದಾಗಿ ಕೂಡ ಸ್ಪಸ್ಟೀಕರಿಸಿರುತ್ತಾರೆ. ರಬ್ಬರ್ ವಿಭಾಗಗಳ ನೆಡುತೋಪುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿರುತ್ತಾರೆ. ಕಾರ್ಮಿಕರು ಉತ್ತಮವಾಗಿ ನಿಗಮದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ನಿಗಮಕ್ಕೆ ಉತ್ತಮ ಲಾಭ ತರುವಲ್ಲಿ ಶ್ರಮಿಸಬೇಕೆಂದು ಕೋರಿರುತ್ತಾರೆ. ಮಾನ್ಯ ವ್ಯವಸ್ಥಾಪಕ ನಿರ್ದೇಶಕರವರು ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸಿರುತ್ತಾರೆ ಹಾಗೂ ಉತ್ತಮ ಭರವಸೆಗಳನ್ನು ನೀಡಿರುತ್ತಾರೆ. ಮಾನ್ಯ ವ್ಯವಸ್ಥಾಪಕರವರ ಸ್ಪಂದನೆಯು ನಮಗೆ ಸಂತೋಷ ಹಾಗೂ ಕೆಲಸ ನಿರ್ವಹಿಸಲು ಉತ್ಸಾಹ ತಂದಿರುತ್ತದೆ ಎಂದೂ ಚಂದ್ರಲಿಂಗಂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಮುಖಂಡರಾದ ಎಂ ಎಸ್ ಕುಮಾರ್, ಗಣೇಶ್, ನ.ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಸಿದ್ದಿಕ್ ಕೊಕ್ಕೊ, ಶಹೀದ್ ಪಾರೆ ಮೊದಲಾದವರಿದ್ದರು.