ಮಂಗಳೂರಿನಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ ಆಚರಣೆ….
ಮಂಗಳೂರು: ನೆಹರು ಮೈದಾನದಲ್ಲಿ ಶುಕ್ರವಾರ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಜರುಗಿತು. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಸ್ತಾವಿತ ನೂತನ ಶಿಕ್ಷಣ ನೀತಿಯಿಂದ ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಅನುಷ್ಠಾನ ಮಾಡಲು ಅವಕಾಶವುಂಟಾಗಿದೆ ಎಂದರು. ಮನಪಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಂದಿನ ವರ್ಷ ನೀಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಾ.ಭರತ್ ಶೆಟ್ಟಿ, ಐವನ್ ಡಿಸೋಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ರೂಪಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.