ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ದಿ. ಇಂದಿರಾಗಾಂಧಿ ಪುಣ್ಯತಿಥಿ, ವಲ್ಲಭ ಭಾಯಿ ಜನ್ಮದಿನಾಚರಣೆ….
ಪುತ್ತೂರು: ಈ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ದೇಶದ ಅಖಂಡತೆ, ಸಾರ್ವಭೌಮತೆ ಮತ್ತು ಐಕ್ಯತೆಗಾಗಿ ದುಡಿದ ದಿಟ್ಟ ಮಹಿಳೆಯಾಗಿದ್ದು, ಅವರ ತ್ಯಾಗ, ಬಲಿದಾನಗಳನ್ನು ನೆನಪಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ದಿ. ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ದೇಶದ ಮಾಜಿ ಗೃಹ ಸಚಿವ ,ಸ್ವಾತಂತ್ರ ಹೋರಾಟಗಾರ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿರಾಗಾಂಧಿ ದೇಶಕ್ಕಾಗಿ ಹಲವು ಕೊಡುಗೆಗಳನ್ನು ನೀಡಿದ್ದು ಬಡವರಿಗಾಗಿ ಅಕ್ರಮ ಸಕ್ರಮ, 20 ಅಂಶ ಕಾರ್ಯಕ್ರಮ, ಹುಡ್ಕೋ ಮನೆ ಯೋಜನೆಯಂತಹ ಹಲವಾರು ಕಾರ್ಯಕ್ರಮ ಜಾರಿಗೊಳಿಸಿ ಶ್ರೀ ಸಾಮಾನ್ಯರ ಬದುಕಿಗೆ ಹೊಸ ಬೆಳಕು ಚೆಲ್ಲಿದ್ದಾರೆ. ಬ್ಯಾಂಕ್ ರಾಷ್ಟ್ರೀಕರಣಗೊಳಿಸುವ ಮೂಲಕ ಶ್ರೀ ಸಾಮಾನ್ಯರೂ ಬ್ಯಾಂಕ್‍ನ ಬಾಗಿಲಿಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ಇದೀಗ ಬ್ಯಾಂಕ್ ಮುಚ್ಚುವ ಕೆಲಸ ಈಗಿನ ಸರ್ಕಾರದಿಂದ ನಡೆಯುತ್ತಿರುವುದು ಖೇದಕರ. ನಾವು ಇಂದಿರಾಗಾಂಧಿಯವರ ಹಾದಿಯಲ್ಲಿ ಮುನ್ನಡೆಯುವ ಪ್ರತಿಜ್ಞೆ ಮಾಡಿದಾಗ ಮರಳಿ ಭಾರತದ ವೈಭವವನ್ನು ಕಾಣಲು ಸಾಧ್ಯ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಕಾರ್ಯದರ್ಶಿಯಾದ ಜಿ,ಪಂ ಸದಸ್ಯ ಎಂ.ಎಸ್. ಮಹಮ್ಮದ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ಮಾತನಾಡಿದರು. ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ದುರ್ಗಾಪ್ರಸಾದ್ ರೈ ಕುಂಬ್ರ ವಂದಿಸಿದರು.