ಕೃಷಿಗಾಗಿ ನೇತ್ರಾವತಿ ನದಿ ನೀರು ಬಳಕೆ ನಿಷೇಧ- ಚುನಾವಣಾ ಬಹಿಷ್ಕಾರ???
ಬಂಟ್ವಾಳ: ಕೃಷಿಗಾಗಿ ನೇತ್ರಾವತಿ ನದಿ ನೀರು ಬಳಕೆದಾರರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ರೈತರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ವಿದ್ಯುತ್ ಶಕ್ತಿ ಸರಬರಾಜು ಸ್ಥಗಿತಗೊಳಿಸಿ ರೈತರು ಕಷ್ಟಪಟ್ಟು ಬೆಳೆಸಿದ ಕೃಷಿ ಸರ್ವನಾಶ ಆಗುವುದರಿಂದ ಜಿಲ್ಲಾಧಿಕಾರಿಗಳ ರೈತ ವಿರೋಧಿ ಆದೇಶವನ್ನು ಖಂಡಿಸಿ ಚುನಾವಣಾ ಬಹಿಷ್ಕಾರಕ್ಕೆ ರೈತರು ಮುಂದಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ರೈತರು ತೀರ್ಮಾನಿಸಿದ್ದು, ಚುನಾವಣಾ ಬಹಿಷ್ಕಾರದ ಲಿಖಿತ ಮನವಿಯನ್ನು ತಹಶೀಲ್ದಾರ್ ಡಿ. ಅರ್ಚನಾ ಭಟ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಗುರುವಾರದಂದು ನೀಡಲಾಯಿತು.
1984ರಿಂದ ನೇತ್ರಾವತಿ ನದಿಯಲ್ಲಿ ನೀರಿನ ಕೊರತೆ ಎದುರಾದಾಗ ರೈತರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದು ಕೃಷಿಯನ್ನೇ ನಂಬಿ ಜೀವನಸಾಗಿಸುತ್ತಿರುವ ರೈತರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ನದಿ ನೀರು ಬಳಕೆಗೆ ನಿಷೇಧ ಸೂಚಿಸಿದರೆ ಎರಡು ತಿಂಗಳಲ್ಲಿ ನೀರಿಲ್ಲದೆ ಅಡಿಕೆ, ತೆಂಗು ಸರ್ವನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಾರೆ. ದೇಶದ ಬೆನ್ನೆಲುಬು ಅನ್ನದಾತ ಎಂಬ ಹೆಗ್ಗಳಿಕೆಯ ರೈತರ 30 ವರ್ಷಗಳ ಜ್ವಲಂತ ಸಮಸ್ಯೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪರಿಹಾರ ದೊರಕಲಿಲ್ಲ. ಕನಿಷ್ಠ ಎರಡು ದಿನಕ್ಕೊಮ್ಮೆ ನದಿ ನೀರು ಸರಬರಾಜು ಮಾಡುವ ಅವಕಾಶ ರೈತರಿಗೆ ನೀಡದೆ ಇರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರ ಹಿತಾಸಕ್ತಿ ಕಾಪಾಡಲು ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ರೈತರು ಮುಂದಾಗಿದ್ದಾರೆ. ನಿಯೋಗದಲ್ಲಿ ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ರೈತ ಸಂಘದ ಕಾರ್ಯದರ್ಶಿ ಎನ್ ಕೆ ಇದಿನಬ್ಬ, ಸುರೇಶ್ ಗಟ್ಟಿ, ಅಬ್ದುಲ್ ಖಾದರ್, ಅಬ್ದುಲ್ ಜಬ್ಬಾರ್, ಸಂದೇಶ ಗಟ್ಟಿ, ಇಮ್ರಾನ್ , ಅಬ್ದುಲ್ ಲತೀಫ್, ಚಂದ್ರಹಾಸ, ಅಬ್ದುಲ್ ರಶೀದ್, ಅಬ್ದುಲ್ ರಹಮಾನ್, ಹಸೇನಾರ್ ಮೊದಲಾದವರು ಉಪಸ್ಥಿತರಿದ್ದರು.