ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಭರದಿಂದ ಸಾಗುತ್ತಿರುವ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ಭರದಿಂದ ನಡೆಯುತ್ತಿದೆ. ಕಂಪೆನಿಗಳು ಬಯಸುವ ರೀತಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಅವರನ್ನು ನೇಮಕಾತಿಗಾಗಿ ಸಜ್ಜುಗೊಳಿಸಲಾಗುತ್ತಿದೆ.
ಎರಡು ತಿಂಗಳ ಹಿಂದಷ್ಟೇ ಪ್ರಾರಂಭವಾದ ನೇಮಕಾತಿ ಪ್ರಕ್ರಿಯೆಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ 5, ಹಾಗೂ ಅಕ್ಟೋಬರ್ ತಿಂಗಳಿನಲ್ಲಿ 8 ಕಂಪೆನಿಗಳು ಸೇರಿದಂತೆ ಇದುವರೆಗೆ ಹೆಸರಾಂತ 13 ಕಂಪೆನಿಗಳು ಪಾಲ್ಗೊಂಡಿವೆ. ಸಾಪ್ ಲ್ಯಾಬ್, ಕಾಂಟ್ರಾಕ್ಟಿಂಗ್ ಅಸೋಸಿಯೇಟ್ಸ್ ಮಿಡಲ್ ಈಸ್ಟ್ ಲಿಮಿಟೆಡ್, ಡೆಲ್ಟಾಕ್ಸ್, ಸೆಲ್ಕೋ ಸೋಲಾರ್ ಪವರ್, ಯುನಿಕೋರ್ಟ್, ಸೈನ್‍ಡೆಸ್ಕ್, ಕೆಡೆನ್ಸ್ ಡಿಸೈನ್ ಸಿಸ್ಟಮ್ಸ್, ಸಾಸ್ಕೆನ್, ಇಜಿಡಿಕೆ ಮುಂತಾದ ಕಂಪೆನಿಗಳು ಕಾಲೇಜಿಗೆ ಆಗಮಿಸಿ ಪ್ರಕ್ರಿಯೆಯನ್ನು ನಡೆಸಿವೆ. ವಾರ್ಷಿಕ 5 ಲಕ್ಷದಿಂದ ಪ್ರಾರಂಭಿಸಿ 15 ಲಕ್ಷದವರೆಗಿನ ಸಂಬಳವನ್ನು ಗಳಿಸುವ ಹುದ್ದೆಗೆ ನೇಮಕಾತಿ ನಡೆದಿದೆ. 21 ವಿದ್ಯಾರ್ಥಿಗಳು ಈಗಾಗಲೇ ನೇಮಕಾತಿ ಆದೇಶವನ್ನು ಪಡೆದುಕೊಂಡಿದ್ದಾರೆ. ಕೆಲವು ಕಂಪೆನಿಗಳ ಅಂತಿಮ ಸುತ್ತಿನ ಪ್ರಕ್ರಿಯೆ ನಡೆಯಬೇಕಿದ್ದು, ಇನ್ನು ಕೆಲವು ಕಂಪೆನಿಗಳ ಫಲಿತಾಂಶ ಇನ್ನಷ್ಟೇ ಹೊರ ಬೀಳಬೇಕಿದೆ.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಪ್ರತಿಷ್ಠಿತ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸುತ್ತಿದ್ದು, ಇನ್ನೂ ಹೆಚ್ಚಿನ ಕಂಪೆನಿಗಳು ಕಾಲೇಜಿಗೆ ಆಗಮಿಸಲಿವೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.