ದಂಪತಿ.ಕಾಮ್ ಉಚಿತ ನೋಂದಣಿ ಕಚೇರಿ ಉದ್ಘಾಟನೆ…
![whatsapp image 2025 02 14 at 8.47.54 am](wp-content/uploads/2025/02/whatsapp-image-2025-02-14-at-8.47.54-am-780x470.jpeg)
ಉಡುಪಿ : ಭಾರತ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಶ್ರೀಪುತ್ತಿಗೆ ಮಠದ ಶಾಖೆಗಳ ವಿಸ್ತೃತ ಸೇವಾಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ ದಂಪತಿ.ಕಾಮ್‌ಗೆ ಉಚಿತ ನೋಂದಣಿ ಕಚೇರಿಯನ್ನು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತಮ್ಮ ಪರಮಗುರುಗಳಾದ ಮಹಾತಪಸ್ವಿ ಶತಾಯುಷಿ ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ಪರ್ವಕಾಲದಲ್ಲಿ ಫೆ.12ರಂದು ಉದ್ಘಾಟಿಸಿದರು.
ಉಡುಪಿ ಶ್ರೀಕೃಷ್ಣ ಮಠದ ಸಮೀಪವಿರುವ ಗೀತಾಮಂದಿರದ ಮುಂಭಾಗದಲ್ಲಿ ರಾಜಾಂಗಣಕ್ಕೆ ತಾಗಿಕೊಂಡಂತೆ ಇರುವ ನೂತನ ಕಚೇರಿಯಲ್ಲಿ ದೀಪ ಉರಿಸಿ ಶ್ರೀನಿವಾಸ-ಪದ್ಮಾವತಿಯರ ವಿಗ್ರಹಕ್ಕೆ ಆರತಿ ಬೆಳಗಿ ಆಶೀರ್ವಚನಗೈದರು.
ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹಗಳು ಈ ಕಾಲದ ತುರ್ತು ಅಗತ್ಯವಾಗಿದ್ದು ಇದಕ್ಕಾಗಿಯೇ ದಂಪತಿ.ಕಾಮ್ ಕಾರ್ಯತತ್ಪರವಾಗಿದೆ.
ನೂತನ ವಧೂವರರ ಜಾಗತಿಕ ಮೇಳಾಮೇಳಿಗಾಗಿ ವಿನೂತನ ತಂತ್ರಜ್ಞಾನೀ ಮಾಧ್ಯಮವನ್ನು ಅಳವಡಿಸಿಕೊಂಡ ಈ ಉಚಿತ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ದಂಪತಿ.ಕಾಮ್‌ನ ಅಖಿಲ ಭಾರತ ಸಂಚಾಲಕ ಕೆ. ವಿ. ರಮಣಾಚಾರ್ಯ, ತಾಂತ್ರಿಕ ವಿಭಾಗದ ರಾಮಪ್ರಿಯ, ನಿರ್ವಾಹಕ ಬಳಗದ ವಿಕ್ರಂ ಕುಂಟಾರ್, ರವೀಂದ್ರ, ಅಂತರ್ಯಾಮಿಯ ಪ್ರಮೋದ್, ಶ್ರೀನಿವಾಸ್ ರಾವ್, ಸಾಂಸ್ಕೃತಿಕ ಸಮಿತಿಯ ಪ್ರಮುಖ ರಮೇಶ್ ಭಟ್, ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ, ಕಚೇರಿ ಸಿಬ್ಬಂದಿ ಸುಷ್ಮಿತಾ, ಅಕ್ಷಯ ಮತ್ತಿತರರು ಉಪಸ್ಥಿತರಿದ್ದರು.
ಕಚೇರಿಯು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರಲಿದ್ದು ಆಸಕ್ತ ಹಿಂದೂ ವಿವಾಹಾಪೇಕ್ಷಿಗಳು ಉಚಿತ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.