ಅಗತ್ಯ ಪದಸೃಷ್ಟಿಯ ಸಾಮರ್ಥ್ಯ ನಮ್ಮ ಭಾಷೆಗಿದೆ: ರಾಘವೇಶ್ವರ ಶ್ರೀ…

ಗೋಕರ್ಣ: ಹೊಸ ಹೊಸ ಅನ್ವೇಷಣೆಗಳು ಆದಾಗ, ಹೊಸ ವಸ್ತುಗಳು ಬಂದಾಗ ಅದಕ್ಕೆ ತಕ್ಕ ಪದಗಳನ್ನು ಸೃಷ್ಟಿಸುವ ಸಾಮರ್ಥ್ಯ ಮತ್ತು ಸಮೃದ್ಧತೆ ನಮ್ಮ ಭಾಷೆಗೆ ಇದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯಲ್ಲಿ ಸ್ವಭಾಚಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 22ನೇ ದಿನವಾದ ಗುರುವಾರ ಸುಳ್ಯ, ಕೊಡಗಗು, ಗುತ್ತಿಗಾರು, ಗುಂಪೆ, ಎಣ್ಮಕಜೆ ಮತ್ತು ಕಾಸರಗೋಡು ವಲಯಗಳ ಶಿಷ್ಯಭಕ್ತರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಭಾಷೆಯಿಂದ ಮೊದಲ್ಗೊಂಡು ನಮ್ಮತನ, ನಮ್ಮ ಉಡುಗೆ- ತೊಡುಗೆ, ನಮ್ಮ ಆಹಾರ- ವಿಹಾರ, ನಮ್ಮ ಸಂಸ್ಕೃತಿ- ಪರಂಪರೆಗೆ ಮರಳುವುದು ಅಗತ್ಯ ಎಂದು ಕರೆ ನೀಡಿದರು. ಇಂಗ್ಲಿಷ್ ಪದಗಳಿಂದ ಭಾಷೆಯನ್ನು ಕಲುಷಿತಗೊಳಿಸುವ ಬದಲು ಸಂಸ್ಕೃತ ಅಥವಾ ಇತರ ಭಾರತೀಯ ಭಾಷೆಯ ಪದಗಳನ್ನು ಆಧಾರವಾಗಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಹೊಸ ಪದಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.
ಧ್ಯಾನದಿಂದ ಅಂತರಂಗದ ಶುದ್ಧಿ ಮಾಡುವಂತೆ, ದೇಹದ ಕಲ್ಮಶಗಳೂ ಪ್ರತಿದಿನ ಶುಚಿಯಾಗಬೇಕು. ನವರಂಧ್ರಗಳೂ ಕಲ್ಮಶಗಳನ್ನು ಸೃಷ್ಟಿಸುತ್ತಿರುತ್ತವೆ. ಬೆಳಿಗ್ಗೆ ಮೊದಲು ಶುದ್ಧಿಕಾರ್ಯಗಳನ್ನು ನಡೆಸಬೇಕು. ಇಲ್ಲೂ ನಮ್ಮ ಹಿರಿಯರು ಅನುಸರಿಸುತ್ತಿದ್ದ ವಿಧಾನಕ್ಕೆ ಮರಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದಿನಕ್ಕೊಂದು ಇಂಗ್ಲಿಪ್ ಪದ ತ್ಯಜಿಸುವ ಅಭಿಯಾನದಲ್ಲಿ ಟೂತ್‍ಪೇಸ್ಟ್- ಟೂತ್‍ಬ್ರೆಷ್ ಪದವನ್ನು ಮತ್ತು ಕ್ರಮೇಣ ಈ ಸಂಸ್ಕೃತಿಯನ್ನು ತ್ಯಜಿಸುವುದು ಒಳ್ಳೆಯದು. ಏಕೆಂದರೆ ಟೂತ್ ಬ್ರೆಷ್ ಎಂಬ ನಿಷೇಧಿತ ಪ್ಲಾಸ್ಟಿಕ್ ಸಾಧನ ಬಳಕೆಯೊಂದಿಗೆ ನಾವು ದಿನವನ್ನು ಆರಂಭಿಸುತ್ತೇವೆ. ಇದನ್ನು ಬಿಟ್ಟು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಹೊಂಗೆ, ಬೇವಿನಕಡ್ಡಿ, ಮಾವಿನಕಡ್ಡಿ, ಆಲದ ಕಡ್ಡಿಯನ್ನು ಬಳಸುವುದು ಅಗತ್ಯ ಎಂದರು.
ಒಂದೇ ಬಾರಿಗೆ ಟೂತ್‍ಪೇಸ್ಟ್ ಬಿಡಲು ಸಾಧ್ಯವಾಗದಿದ್ದರೆ ಮರಳಿನ ಪುಡಿ, ಎಲುಬಿನ ಪುಡಿ, ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಿದ ದಂತಮಂಜನ ಬಳಸದೇ ಮಂಗಲದ್ರವ್ಯಗಳಿಂದ ತಯಾರಿಸಿದ ಉತ್ಪನ್ನಗಳ ಬಳಕೆ ಆರಂಭವಾಗಲಿ ಎಂದು ಆಶಿಸಿದರು.
ಸಂಸ್ಕೃತದ ಪಿಷ್ಟ, ಕನ್ನಡದಲ್ಲಿ ಹಿಟ್ಟು ಎಂದು ಕರೆಯಲ್ಪಡುತ್ತಿದ್ದು, ಇಂಗ್ಲಿಷ್‍ನಲ್ಲಿ ಪೇಸ್ಟ್ ಆಗಿದೆ ಎಂದು ವಿಶ್ಲೇಷಿಸಿದರು. ಹೊಂಗೆ, ಬೇವಿನಕಡ್ಡಿ, ಮಾವಿನ ಕಡ್ಡಿಯನ್ನು ಅಗಿದು ದಂತದಾವನ ಮಾಡಲಾಗುತ್ತಿತ್ತು. ದಂತ ಚೂರ್ಣ ಬಳಕೆ ಇತ್ತು. ಬಳಿಕ ದಂತಮಂಜನ ಆಯಿತು. ಕನ್ನಡದಲ್ಲಿ ಟೂತ್‍ಪೇಸ್ಟ್ ಹಲ್ಸರಿ ಎಂಬ ಪದ ಇದ್ದು, ಇದರ ಬಳಕೆ ಹೆಚ್ಚಲಿ ಎಂದರು.
ನೂತನ ಪದಾಧಿಕಾರಿಗಳಾಗಿ ನಿಯುಕ್ತರಾದ ಸೇವಾಬಿಂದುಗಳನ್ನು ಆಶೀರ್ವದಿಸಿ, “ಸೇವೆಗೆ ಹೆಚ್ಚು ಶಕ್ತಿ ಮತ್ತು ಪ್ರೇರಣೆಯನ್ನು ಶ್ರೀರಾಮ ಅನುಗ್ರಹಿಸಲಿ” ಎಂದು ಆಶಿಸಿದರು. ಎಲ್ಲ ಸೇವಾಬಿಂದುಗಳು ನಿಮ್ಮ ನಿಮ್ಮ ಹುದ್ದೆಗಳಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ಸಲಹೆ ಮಾಡಿದರು. ಪದಾಧಿಕಾರದಿಂದ ಬಿಡುಗಡೆಯಾದವರು ಬೇರೆ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾಜವನ್ನು ಬೆಳಗಿದ ಗುರುಗಳ ಪ್ರೀತ್ಯರ್ಥವಾಗಿ ಲಕ್ಷ ತುಳಸಿ ಅರ್ಚನೆ ನಡೆದಿದೆ. ಈ ನೆಲವನ್ನು ಬಿಟ್ಟುಹೋಗುವ ಸಂದರ್ಭದಲ್ಲಿ ಅವರ ಮನಸ್ಸುಗಳಿಗೆ ಆಗಿರಬಹುದಾದ ನೋವನ್ನು ನಿವಾರಿಸುವ ಸಲುವಾಗಿ ಚಾತುರ್ಮಾಸ್ಯದ ಅವಧಿಯಲ್ಲಿ ಎಂಟು ಗುರುವಾರ ಲಕ್ಷ ತುಳಸಿ ಅರ್ಚನೆ ನಡೆಯಲಿದೆ ಎಂದು ಹೇಳಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಸೇವಾ ಪ್ರಧಾನ ಕೃಷ್ಣಮೂರ್ತಿ ಮಾಡಾವು, ಮುಳ್ಳೇರಿಯಾ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಹಿರಿಯ ಲೋಪಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು. ಗುರುಪರಂಪರೆಗೆ ವಿಷ್ಣುಸಹಸ್ರನಾಮಪೂರ್ವಕವಾಗಿ ಲಕ್ಷ ತುಳಸಿ ಅರ್ಚನೆ ನಡೆಯಿತು.

whatsapp image 2025 07 31 at 8.59.50 pm (1)

whatsapp image 2025 07 31 at 8.59.50 pm (2)

Related Articles

Back to top button