ಪುತ್ತೂರು ಬಾಲವನದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ……
ಪುತ್ತೂರು: ಈಜು ಶರೀರಕ್ಕೆ ಮತ್ತು ಮನಸ್ಸಿಗೆ ಆರೋಗ್ಯಕರವಾದ ವ್ಯಾಯಾಮ ಒದಗಿಸುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗಗಳನ್ನು ಅದು ಸುಸ್ಥಿತಿಯಲ್ಲಿಡಲು ಸಹಕಾರಿಯಾಗುತ್ತದೆ. ಆದರೆ ನೀರು ಮತ್ತು ಬೆಂಕಿಯ ಜತೆ ಸರಸ ಸಲ್ಲದು ಎಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ಫಾ. ಆಲ್ಫ್ರೆಡ್ ಜೆಪಿಂಟೋ ಹೇಳಿದರು.
ಅವರು ಗುರುವಾರ ದ.ಕ.ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್ ಅವರು ಈಜು ಎಂಬುದು ಜೀವರಕ್ಷಕ ಕಲೆಯಾಗಿದೆ. ಅಪಾಯದ ಸಂದರ್ಭದಲ್ಲಿ ಈಜು ಕಲಿತವರಿಗೆ ಅಪಾಯದಿಂದ ಪಾರಾಗಲು ಉತ್ತಮ ದಾರಿಯಾಗುತ್ತದೆ. ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ ದೇಹವನ್ನು ಮತ್ತೂ ಹುರಿಗೊಳಿಸುತ್ತದೆ ಎಂದರು.
ಪುತ್ತೂರು ಆಕ್ವೆಟಿಕ್ ಕ್ಲಬ್ ಸದಸ್ಯೆ ಪ್ರತಿಮಾ ಹೆಗ್ಡೆ ಅವರು ಮಾತನಾಡಿ ವಿದ್ಯಾರ್ಥಿಗಳು ಜೀವರಕ್ಷಕ ಕಲೆಯಾಗಿರುವ ಈಜಿನ ಬಗ್ಗೆ ಹೆಚ್ಚಿನ ಒಲವು ತೋರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೋ ಸ್ವಾಗತಿಸಿದರು. ಆಂಗ್ಲ ವಿಭಾಗದ ಉಪನ್ಯಾಸಕಿ ಸತ್ಯಲತಾ ರೈ ವಂದಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಡಾ.ಆಶಾ ಸಾವಿತ್ರಿ ನಿರೂಪಿಸಿದರು.
ಈಜು ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂವ ಕಾಲೇಜುಗಳ ಪೈಕಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು,ಶಾರದಾ ವಿದ್ಯಾನಿಕೇತನ ಕಾಲೇಜು, ಯೇನಪೋಯ ಕಾಲೇಜು, ಬೋಸ್ಕೋಸ್ ಕಾಲೇಜು, ಪುತ್ತೂರಿನ ಅಂಬಿಕಾ ಕಾಲೇಜು, ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜ್ ಸೇರಿದಂತೆ ಒಟ್ಟು 29 ಮಂದಿ ಬಾಲಕರು ಹಾಗೂ 11 ಮಂದಿ ಬಾಲಕಿಯರು ಭಾಗವಹಿಸಿದ್ದರು.