ಅಯನಾ ಅದ್ಭುತ ಕಲಾವಿದೆ — ಹರಿದಾಸ್ ಭಟ್…
ಮುಂಬೈ : ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣ ಗಳ ವಿಶಿಷ್ಟ ಸಮ್ಮೇಳನದ “ನಾಟ್ಯಾಯನ ” ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯ ಅಯನಾ. ವಿ. ರಮಣ್, ಅನನ್ಯ- ಅದ್ಭುತ ಕಲಾವಿದೆ. ದಕ್ಷಿಣಾಯನ- ಉತ್ತರಾಯಣಗಳ ಸೂರ್ಯ ಚಲನೆಯ ಹೆಸರನ್ನು ಹೊಂದಿರುವ ಆಕೆ , ಅಷ್ಟೇ ಪ್ರಖರ – ಪ್ರಚಂಡ ಪ್ರತಿಭೆ ಎಂದು ಮುಂಬೈಯ ಶ್ರೀ ಗಾಂದೇವಿ ಅಂಬಿಕಾ ಶ್ರೀ ಆದಿ ನಾಥೆಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಪೆರಣoಕಿಲ ಹರಿದಾಸ್ ಭಟ್ ಹೇಳಿದ್ದಾರೆ.
ಅಸಾಧಾರಣ ಸ್ಮರಣ ಶಕ್ತಿ , ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಈ ಕಲಾವಿದೆ , ಭಗವದ್ಗೀತೆ- ವೇದಸೂಕ್ತ ಗಳ ಪ್ರಸ್ತುತಿಯಿರುವ ನೃತ್ಯ- ನೃತ್ತ ಭರತನಾಟ್ಯದ ಮೂಲಕ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದು ವಿಶ್ಲೇಷಿಸಿದ ಅವರು , ರಾಷ್ಟ್ರಮಟ್ಟದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಲಭಿಸಲಿ ಎಂದು ಆಶೀರ್ವದಿಸಿದರು . ಶ್ರೀ ಶ್ರೀ ಡಾ. ಸುಗುಣೇoದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದ ಗಳೊಂದಿಗೆ ಶ್ರೀ ಕ್ಷೇತ್ರದಲ್ಲಿ ಅ.20 ರಂದು ನಡೆದ “ನವರಾತ್ರಿ ವಿಶೇಷ – ನಾಟ್ಯಾಯನ” ಕೋಟಿ ಗೀತಾ ಲೇಖನ ಯಜ್ಞ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡುತ್ತಿದ್ದರು .
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಪೂರ್ವ ಅಧ್ಯಕ್ಷ ಮತ್ತು ಎಂ. ಡಿ. ಡಾ. ಎಂ. ನರೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಸಭೆಯಲ್ಲಿ ಅಯನಾ ಅವರಿಗೆ ಚಿನ್ನದ ಕೈ ಕಡಗ ತೊಡಿಸಿ, ಸೀರೆ- ಶಾಲು ಹೊದಿಸಿ ಸನ್ಮಾನಿಸಲಾಯಿತು. ಇನ್ನೊಬ್ಬ ಮುಖ್ಯ ಅತಿಥಿ – ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ ನ ರಾಜ್ಯ ಅಧ್ಯಕ್ಷ- ಕಲಾವಿದ ಸುರೇಂದ್ರ ಕುಮಾರ್ ಹೆಗ್ಡೆ ಅಭಿನಂದನಾ ನುಡಿ ಗಳನ್ನು ಆಡಿದರು. ಮುಂಬೈ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರಕಿಯರಾದ ನಿವೃತ್ತ ಕೆನರಾ ರೊಬೋಕೋ ಮ್ಯೂಚುವಲ್ ಫಂಡ್ ಸಹಾಯಕ ಪ್ರಬಂಧಕಿ ಅನಿತಾ ಅಶೋಕ್ ಶೆಣೈ , ಪೂರ್ವ ಕಾರ್ಪೊರೇಟ್ ಲಾಯರ್- ಫಿಲ್ಮ್ ಮೇಕರ್ ಅಮ್ರೀತಾ ರಾಯ್ ಸಾಂದರ್ಭಿಕವಾಗಿ ಮಾತನಾಡಿ ಅದ್ಭುತ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೆತ್ತವರಾದ ಡಾ. ಮೂಕಾಂಬಿಕ . ಜಿ. ಎಸ್ – ಗೀತಾ ಪ್ರಚಾರಕ ಕೆ. ವಿ. ರಮಣ್ ಆಚಾರ್ಯ ದಂಪತಿಯನ್ನು ಗೌರವಿಸಲಾಯಿತು. ಕ್ಷೇತ್ರದ ಆಡಳಿತ ಮೊಕೇಸರ ಹರಿದಾಸ್ ಗೋಪಾಲ್ ಶೆಟ್ಟಿ , ಶ್ರೀ ಪುತ್ತಿಗೆ ಮಠದ ರಾಧಾಕೃಷ್ಣ ಆಚಾರ್ಯ , ಪ್ರಚಾರಕಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ಕಲಾ ಸಂಘಟಕ ಪದ್ಮನಾಭ ಸಸಿಹಿತ್ತಿಲು ನಿರೂಪಿಸಿದರು.
ಕಾರ್ಯಕ್ರಮದ ನಡು – ನಡುವೆ ಗೀತಾ ಲೇಖನ ಯಜ್ಞದ ಹೊತ್ತಿಗೆಗಳನ್ನು ವಿತರಿಸಲಾಯಿತು. ಕೆ. ವಿ. ರಮಣ್ ಆಚಾರ್ಯ,ಮಂಗಳೂರು ಅವರ ಪರಿಕಲ್ಪನೆ- ನಿರ್ದೇಶನ- ನಿರೂಪಣೆಯಲ್ಲಿ ಮೂಡಿ ಬಂದ ಚಂದ್ರಶೇಖರ್ ಮಂಡಕೋಲು ಅವರ ಪ್ರಶಸ್ತಿ ಪಡೆದ, ಭಾರತದ ಮೊಟ್ಟಮೊದಲ ಮಹಿಳಾ ವೈದ್ಯ ಆನಂದಿ ಬಾಯಿ ಜೋಷಿ ಜೀವನ ಕಥಾನಕ “ಅಗ್ನಿ ದಿವ್ಯದ ಹುಡುಗಿ ” ಏಕ ವ್ಯಕ್ತಿ ನಾಟಕ ಪ್ರದರ್ಶನ ಸಹಿತ ನಾಟ್ಯಾಯನ ಕಾರ್ಯಕ್ರಮ ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಯಿತು.