ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಕಲ್ಲಡ್ಕ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ, ಗ್ರಾಮ ಗೌರವ ಹಾಗೂ “ಶಾಂತಶ್ರೀ” ಪ್ರಶಸ್ತಿ ಪ್ರದಾನ…

ಬಂಟ್ವಾಳ: ಬಂಟ್ವಾಳ ತಾಲೂಕಿನ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಕಲ್ಲಡ್ಕ ವತಿಯಿಂದ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯುತ್ತಿರುವ 48 ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಮಂಗಳವಾರ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್ ಎಚ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಧಾನ ಧಾರ್ಮಿಕ ಉಪನ್ಯಾಸ ಮಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಮಾತನಾಡಿ ಮಕ್ಕಳಿಗೆ ಮನೆಯಲ್ಲಿ ಸಿಗುವ ಸಂಸ್ಕಾರದ ಕೊರತೆಯಿಂದಾಗಿ ಈಗಿನ ಜನಾಂಗ ನಾಗರಿಕ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ಜೊತೆಗೆ ನನ್ನ ದೇಶದ ಶ್ರೇಷ್ಠತೆಯ ಬಗ್ಗೆ ಹೆಮ್ಮೆ ಇರುವುದರಿಂದ ಸ್ವದೇಶಿ ಭಾವದ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ವಿಶೇಷ ಸಾಧನೆಗಾಗಿ ವಿದ್ಯಾರ್ಥಿ ಜಗನ್ ಹಾಗೂ ಪತ್ರಕರ್ತ ಭರತ್ ರಾಜ್ ಕಲ್ಲಡ್ಕ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉದ್ಯಮ ಕ್ಷೇತ್ರದಲ್ಲಿ ಸಾಧಕರಾದ ಶ್ರೀಮತಿ ನಾಗರತ್ನ ಪುರ್ಲಿಪಾಡಿ ಹಾಗೂ ಹಿರಿಯ 104 ವರ್ಷದ ಶ್ರೀ ಅಯ್ಯಪ್ಪ ವೃತದಾರಿ ಶ್ರೀಮತಿ ಕಮಲ ಗುರುಸ್ವಾಮಿ ಕುಂಟಿಪಾಪು ರವರಿಗೆ “ಗ್ರಾಮ ಗೌರವ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೆ ಶಾಂತರಾಮ್ ಆಚಾರ್ಯ ಕಲ್ಲಡ್ಕ ಸ್ಮರಣಾರ್ಥ ನೀಡುವ “ಶಾಂತಶ್ರೀ ” ಪ್ರಶಸ್ತಿಯನ್ನು ಕಲಾ ಸೇವೆಗಾಗಿ ಭರತನಾಟ್ಯ ಕಲಾವಿದೆ ವಿದುಷಿ ಶ್ರೀಮತಿ ವಿದ್ಯಾ ಮನೋಜ್ ರವರಿಗೆ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಚೆಂಡೆ, ಗೊಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ್ ಗೌಡ ಮಕ್ಕಾರ್, ಪ್ರಗತಿಪರ ಕೃಷಿಕ ಮಿಥುನ್ ಕುಮಾರ್ ಹೊಸಮನೆ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಯತಿನ್ ಕುಮಾರ್ ಏಳ್ತಿಮಾರು ಸ್ವಾಗತಿಸಿ, ಕಾರ್ಯದರ್ಶಿ ವಜ್ರನಾಥ ಮಡ್ಲಮಜಲ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.