ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ….
ಪುತ್ತೂರು: ಗ್ರಾಮ ಪಂಚಾಯತ್‍ಗಳಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಿಕೊಡುವಂತೆ ತಿಳಿಸಿದರೂ ಬಹುತೇಕ ಕಡೆಗಳಲ್ಲಿ ಇನ್ನೂ ವ್ಯವಸ್ಥೆ ಮಾಡಿಲ್ಲ. ಕಳೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಕಾರ್ಯನಿರ್ವಹಣಾಧಿಕಾರಿಗಳು ಒಂದು ವಾರದ ಒಳಗಾಗಿ ಮಾಡುವಂತೆ ತಿಳಿಸಿದ್ದಾರೆ. ಆದರೆ ನಮಗೆ ಆಸನದ ವ್ಯವಸ್ಥೆ ಮಾಡಲಾಗಿಲ್ಲ. ಇದು ಖಂಡನೀಯವಾಗಿದ್ದು ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ತಾಪಂ ಸದಸ್ಯರು ಆಗ್ರಹಿಸಿದ ಘಟನೆ ನ.21 ರಂದು ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಶಾ ಲಕ್ಷ್ಮಣ್ ಮತ್ತು ಉಷಾ ಅಂಚನ್ ಅವರು ಗ್ರಾಮ ಪಂಚಾಯತ್‍ಗಳಲ್ಲಿ ಮಹಿಳಾ ತಾಲೂಕು ಪಂಚಾಯತ್ ಸದಸ್ಯರಿಗೆ ಅಗೌರವ ಮಾಡಲಾಗಿದೆ. ಅವರಿಗೆ ಆಸನದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿ ಫಝಲ್ ಕೋಡಿಂಬಾಡಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಪಿ. ವರ್ಗಿಸ್ ಮತ್ತು ಸರ್ವೋತ್ತಮ ಗೌಡ ಅವರು ಕೆಲವು ಪಂಚಾಯತ್‍ಗಳಲ್ಲಿ ನಮಗೆ ಆಸನದ ವ್ಯವಸ್ಥೆ ಮಾಡದಿರುವುದು ಸರಿಯಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ವಾರದ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇಚ್ಲಂಪಾಡಿ ಶಾಲಾ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ನೇಲ್ಯಡ್ಕ, ಮೂರಾಜೆ ,ಕಡಬ ಪೌಢಶಾಲೆ ಸೇರಿದಂತೆ ಕಡಬಭಾಗದ ಶಾಲೆಗಳು ನಾದುರಸ್ಥಿಯಲ್ಲಿವೆ. ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿರುವ, ಗೆದ್ದಲು ಹಿಡಿದು ಮಾಡು ತೀರಾ ಶಿಥಿಲಾವಸ್ಥೆಯಲ್ಲಿರುವ ಯಾವ ಶಾಲೆಯನ್ನೂ ಪಟ್ಟಿಗೆ ಸೇರಿಸಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಿರುವ ಶಾಲೆಗಳನ್ನು ಈ ಬಾರಿಯ ಪಟ್ಟಿಯಲ್ಲಿ ಸೇರಿಸಲು ಬರುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಉತ್ತರದಿಂದ ಅಸಮಾಧಾನಗೊಂಡ ಜಿಪಂ ಸದಸ್ಯ ಕೆ.ಪಿ.ತೋಮಸ್ ಅವರು, ಕಳೆದ ಬಾರಿ ಪ್ರಸ್ತಾವಣೆ ಸಲ್ಲಿಸಿದರೂ ಯಾವುದೇ ಶಾಲೆಗಳ ದುರಸ್ತಿ ಕೆಲಸ ನಡೆದಿಲ್ಲ. ಹೀಗಿರುವಾಗ ಮತ್ತೆ ಪ್ರಸ್ತಾವನೆ ಕಳುಹಿಸಲು ಆಗುವುದಿಲ್ಲ ಎಂದರೆ ಅರ್ಥವೇನು ಎಂದು ಪ್ರಶ್ನಿಸಿದರು.
ಜನೌಷಧಿ ಯೋಜನೆ ಜನತೆಯ ಪಾಲಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಆದರೆ ಕೆಲವೊಂದು ಜನೌಷಧಿ ಕೇಂದ್ರಗಳಲ್ಲಿ ಹೆಚ್ಚಿನ ಔಷಧಿಗಳು ಇಲ್ಲ ಎಂದು ಸದಸ್ಯ ಗಣೇಶ್ ಕೈಕುರೆ ವಿಷಯ ಪ್ರಸ್ತಾಪಿಸಿದರು. ಪುತ್ತೂರಿನ ಕೆಲವು ಕಡೆಗಳಲ್ಲಿ ಇರುವ ಜನೌಷದಿ ಕೇಂದ್ರಗಳಲ್ಲಿ ಎಲ್ಲಾ ಬಗೆಯ ಔಷಧಿಗಳು ಲಭ್ಯವಿದ್ದರೂ ರೆಡ್‍ಕ್ರಾಸ್ ಸಂಸ್ಥೆ ನಡೆಸುವ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿಯ ಜನೌಷಧಿ ಕೇಂದ್ರದಲ್ಲಿ ಹೆಚ್ಚಿನ ಔಷಧಿಗಳು ಸಿಗುತ್ತಿಲ್ಲ. ಹಾಗಾಗಿ ಇದನ್ನು ರದ್ದುಪಡಿಸಿ ಉತ್ತಮ ಸೇವೆ ನೀಡುವವರಿಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯ ಹರೀಶ್ ಬಿಜತ್ರೆ ಅವರು ಆಗ್ರಹಿಸಿದರು.
ಪುತ್ತೂರು ತಾಲೂಕಿನಲ್ಲಿ ಸಾಲಮನ್ನಾ ಯೋಜನೆಯಡಿ ಒಟ್ಟು 18339 ರೈತರು ಅರ್ಜಿ ಸಲ್ಲಿಸಿದ್ದು,ಈ ಪೈಕಿ 17,011 ರೈತರ ರೂ.111.62 ಕೋಟಿ ಸಾಲ ಮನ್ನಾ ಆಗಿದೆ. ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಹೊಂದಾಣಿಕೆಯಾಗದ ಸಮಸ್ಯೆಯಿಂದ 1060 ರೈತರಿಗೆ ರೂ.18.80 ಕೋಟಿ ನೀಡಲು ಬಾಕಿ ಇದೆ ಎಂದು ಸಹಕಾರಿ ಇಲಾಖೆಯ ಸಹಾಯಕ ನಿಬಂಧಕ ಮಂಜುನಾಥ್ ಸಿಂಗ್ ಅವರು ತಿಳಿಸಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಲಲಿತಾ ಈಶ್ವರ್,ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್ ಉಪಸ್ಥಿತರಿದ್ದರು. ತಾಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ ಕಲಾಪ ನಿರ್ವಹಿಸಿದರು.