ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳ – ಯಥಾ ಸ್ಥಿತಿ ಮುಂದುವರಿಸಲು ಹೈಕೋರ್ಟ್ ಆದೇಶ….
ಮಂಗಳೂರು : ಪಾರಂಪರಿಕ ಕಟೀಲು ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳವನ್ನು ಇಷ್ಟರ ತನಕ ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಮತ್ತು ಸೇವಾಕರ್ತರು ನಡೆಸಿಕೊಂಡು ಹೋಗುತ್ತಿದ್ದ ರೀತಿಯಲ್ಲೇ ಈ ವರ್ಷವೂ ನಡೆಸಿಕೊಂಡು ಹೋಗಲು ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ ಹಾಗು ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಮೇಲ್ವಿಚಾರಣೆಗೆ ನೇಮಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ದೇವಸ್ಥಾನದ ಪಾರಂಪರಿಕ ಮೊಕ್ತೇಸರರು ಸಲ್ಲಿಸಿದ್ದ ಅರ್ಜಿಯು ನ್ಯಾ| ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದು ವಾದ-ಪ್ರತಿವಾದ ಆಲಿಸಿದ ಬಳಿಕ ಈ ಆದೇಶ ನೀಡಲಾಗಿದೆ. ಎಲ್ಲಾ ಲೆಕ್ಕಪತ್ರಗಳನ್ನು ಜಿಲ್ಲಾಧಿಕಾರಿಯೇ ನೋಡಬೇಕು. 15 ದಿನಗಳಿಗೊಮ್ಮೆ ಲೆಕ್ಕಪತ್ರ ಒಪ್ಪಿಸಬೇಕು ಎಂದೂ ಹೈಕೋರ್ಟ್ ಸೂಚಿಸಿದೆ.
ಕಲಾವಿದರ ಸಂಬಳದ ವಿಚಾರದಲ್ಲೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಕಾರ್ಮಿಕರಿಗೆ ಎಲ್ಲಾ ವ್ಯವಸ್ಥೆ ಮಾಡಿ, ಕಲಾವಿದರನ್ನು ಕಾರ್ಮಿಕ ಕಾಯ್ದೆ, ಕ್ಷೇಮ ನಿಧಿ ಅಡಿಯಲ್ಲಿ ತರಬೇಕು ಎಂದು ನಿರ್ದೇಶಿಸಿತು.
ಕೋರ್ಟ್ ಗೆ ಹಾಜರಾದ ಮುಜರಾಯಿ ಆಯಕ್ತರು, ತಾವು ಹೊರಡಿಸಿದ ಅಧಿಸೂಚನೆ ವಾಪಸ್ ಪಡೆಯುವುದಾಗಿ ಮುಚ್ಚಳಿಕೆ ಬರೆದುಕೊಟ್ಟರು. ನ್ಯಾಯಾಲಯದ ತಡೆಯಾಜ್ಞೆ ಇದ್ದಾಗಲೂ ಆದೇಶ ಹೊರಡಿಸಿರುವುದಕ್ಕೆ ಕೋರ್ಟ್ ಕ್ಷಮೆಯಾಚಿಸಿದ ಮುಜರಾಯಿ ಆಯುಕ್ತರು ಈ ಕುರಿತು ಶುಕ್ರವಾರ (ನ.22) ಅನುಪಾಲನ ವರದಿ ಸಲ್ಲಿಸುವುದಾಗಿ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಈ ಮೇಲಿನಂತೆ ನಿರ್ದೇಶನ ನೀಡಿ ವಿಚಾರಣೆ ಡಿ. 9 ರ ತನಕ ಮುಂದೂಡಿತು.