ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ-ಸಂಜೀವ ಮಠಂದೂರು…..
ಪುತ್ತೂರು: ವೈಜ್ಞಾನಿಕ ಯುಗದಲ್ಲಿರುವ ನಾವು ಆಧುನೀಕತೆಯ ಕಾರಣದಿಂದ ಮೌಲ್ಯಗಳಿಂದ ದೂರವಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳ ಮೂಲಕ ಎಲ್ಲರೂ ಒಟ್ಟಾಗಿ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯ ಬದುಕು ಕಂಡು ಕೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪಾಣಾಜೆ ವಿದ್ಯಾವರ್ಧಕ ಸಂಘ ಮತ್ತು ಸುಬೋಧ ಪ್ರೌಢಶಾಲೆ ಪಾಣಾಜೆ ಇವುಗಳ ಸಹಯೋಗದಲ್ಲಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ಟಾಂಪ್ ಬಿಡುಗಡೆಗೊಳಿಸಿದರು.
`ಪಯಣ’ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಗಾಂಧೀಜಿಯವರ 150 ನೆನಪು ಮಾಡಿವುದು ಉತ್ತಮ ಮಾದರಿಯಾಗಿದೆ. ಶಿಬಿರಗಳು ಮಕ್ಕಳಲ್ಲಿ ಕ್ರಿಯಾಶಕ್ತಿ, ಇಚ್ಚಾಶಕ್ತಿಗಳನ್ನು ಮೂಡಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬೇಕು. ಈ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯಶಸ್ವಿಯಾಗಿದೆ. ಮಾನವೀಯತೆ ಮತ್ತು ಸಾಮರಸ್ಯದ ಚಿಂತನೆ ಹಾಗೂ ಸೇವಾ ಮನೋಭಾವನೆ ಮಕ್ಕಳಲ್ಲಿ ಈ ಶಿಬಿರವು ಮೂಡಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲದ ಕಾರಣ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ತಕ್ಷಣವೇ ಈ ಫಲಿತಾಂಶ ಪ್ರಕಟಣೆ ಮಾಡುವ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಂ.ಜಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ತಾಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ,ಸದಸ್ಯೆ ಮೀನಾಕ್ಷಿ ಮಂಜುನಾಥ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ರಾಮಶೇಷ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಆರ್‍ಟಿಒ ಇಲಾಖೆಯ ಪುರುಷೋತ್ತಮ, ಯಕ್ಷಗಾನ ಕಲಾವಿದ ಬಾಲಕೃಷ್ಣ ಪೂಜಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಸ್ಥಳೀಯಾಡಳಿತ ಸಮಿತಿ ಅಧ್ಯಕ್ಷ ಶ್ರೀಧರ್ ರೈ, ಕಾರ್ಯದರ್ಶಿ ವಿದ್ಯಾಗೌರಿ, ಎಂ.ಜಿ. ಕಜೆ, ಭರತ್ ರಾಜ್, ಸುಬೋಧ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಹಾಬಲೇಶ್ವರ ಭಟ್ ಗಿಳಿಯಾಲು, ಮೇಳದ ನಾಯಕ ಶ್ರೀಪತಿ ಭಟ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಾಜಿ ಅಬೂಬಕ್ಕರ್ ಆರ್ಲಪದವು ಮತ್ತಿತರರು ಉಪಸ್ಥಿತರಿದ್ದರು.
ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಭಟ್ ಪಿಲಿಂಗಲ್ಲು ಸ್ವಾಗತಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಎಲ್‍ಟಿ ಸುನಿತಾ ವಂದಿಸಿದರು. ಶಿಕ್ಷಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.