ನ.30-ಪುತ್ತೂರಿನಲ್ಲಿ ಕೃಷಿ ಪೂರಕ ಆವಿಷ್ಕಾರಗಳ ಪ್ರದರ್ಶನ – ಕೃಷಿಕರ ಸಭೆ….
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಆಶ್ರಯದಲ್ಲಿ ಲಘು ಉದ್ಯೋಗ ಭಾರತಿ ಇದರ ಸಹಯೋಗದೊಂದಿಗೆ ನ.30 ಹಾಗು ಡಿ.1 ರಂದು ಕೃಷಿ ಪೂರಕ ಆವಿಷ್ಕಾರಗಳ ಪ್ರದರ್ಶನ ಅನ್ವೇಷಣಾ-2019 ರಾಜ್ಯಮಟ್ಟದ ಕಾರ್ಯಕ್ರಮ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಠಾರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಕೃಷಿಕರ ಸಭೆ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.
ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನಲ್ಲಿ ಕೃಷಿಕರ ಆವಿಷ್ಕಾರಗಳು ಹಾಗೂ ವಿದ್ಯಾರ್ಥಿಗಳ ಸಂಶೋಧನೆಗಳು ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಕಾರ್ಯಕ್ರಮಕ್ಕೆ ಲಘು ಉದ್ಯೋಗ ಭಾರತಿಯೂ ಭಾಗವಹಿಸುವರಿಂದ ಮುಂದಿನ ದಿನಗಳಲ್ಲಿ ಕೃಷಿಕ ಆವಿಷ್ಕಾರಗಳನ್ನು ಕೃಷಿಕರು ಆಸಕ್ತಿ ಹೊಂದಿದ್ದರೆ ಅಭಿವೃದ್ಧಿಪಡಿಸಿ ಕೃಷಿಕರ ಹೆಸರಿನಲ್ಲಿಯೇ ಮಾರುಕಟ್ಟೆಗೆ ಬಿಡುವ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಠಿ ಮಾಡುವ ಉದ್ದೇಶ ಹೊಂದಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಕೃಷಿ ಸಂಶೋಧನೆಗಳ ಕಡೆಗೆ ಆಸಕ್ತಿ ಹುಟ್ಟಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ಈಗಾಗಲೇ ಸುಮಾರು 350 ಕೃಷಿ ಅನ್ವೇಷಣೆಗಳನ್ನು ಗುರುತಿಸಲಾಗಿದೆ. ಆಸಕ್ತ ಕೃಷಿಕರು ತಮ್ಮ ಸಂಶೋಧನೆಗಳನ್ನು ಪ್ರದರ್ಶನ ಮಾಡಲು ಅವಕಾಶ ಇದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಪ್ರಮುಖವಾಗಿ ಕೃಷಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕೃಷಿ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಹಾಗೂ ಅಭಿವೃದ್ಧಿಗೆ ಸಲಹೆ ನೀಡಬೇಕಾಗಿದೆ, ಈ ಕಾರಣದಿಂದ ಹೆಚ್ಚಿನ ಕೃಷಿಕರು ಕಾರ್ಯಕ್ರಮಕ್ಕೆ ಬರುವಂತೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಇ.ಶಿವಪ್ರಸಾದ್ , ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶಿವಪ್ರಕಾಶ್ ಎಂ, ಸಂಚಾಲಕರಾದ ಮುರಳೀಧರ ಕೆ, ಸದಸ್ಯರಾದ ಭರತ್ ಪೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಆರ್ ಸಿ ನಾರಾಯಣ ರೆಂಜ , ಅಡಿಕೆ ಪತ್ರಿಕೆಯ ಸಂಪಾದಕರಾದ ನಾ. ಕಾರಂತ ಪೆರಾಜೆ ಮೊದಲಾದವರಿದ್ದರು.