ಸಮಾಜಕ್ಕಾಗಿ, ಧರ್ಮಕ್ಕಾಗಿ ಆದರ್ಶದ ಜೀವನ ನಡೆಸಿದವರು ನಿತ್ಯ ಪ್ರಾಥ:ಸ್ಮರಣೀಯರು: ಸಂಜೀವ ಮಠಂದೂರು….
ಪುತ್ತೂರು: ಸಮಾಜಕ್ಕಾಗಿ, ಧರ್ಮಕ್ಕಾಗಿ, ಆದರ್ಶದ ಜೀವನ ನಡೆಸಿದವರು ನಮಗೆ ನಿತ್ಯ ಪ್ರಾಥಃ ಸ್ಮರಣೀಯರು. ಗೌಡ ಸಮಾಜ ಸಮಾಜ ಪರವಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ. ಪ್ರತಿಯೊಂದು ಆಚರಣೆಗಳೂ ಮಹತ್ವಪೂರಿತವಾಗಿದ್ದು, ಮುಂದಿನ ಜನಾಂಗಕ್ಕೆ ಪ್ರೇರಣೆ ನೀಡುತ್ತದೆ. ಗೌಡ ಸಮಾಜದಲ್ಲಿನ ಕೌಟುಂಬಿಕ ಪದ್ಧತಿ ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಭಾನುವಾರ ಒಕ್ಕಲಿಗೆ ಗೌಡ ಸಮುದಾಯ ಭವನದಲ್ಲಿ ನಡೆದ ಪುತ್ತೂರು ವಲಯ ಯುವ ಗೌಡ ಸಂಘದಿಂದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ, ಯುವ ಗೌಡ ಸಂಘ, ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಸಂಘದ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಷ್ಟಮಿ ಮತ್ತು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕ ಊರ ಗೌಡರಾದ ದೇವಪ್ಪ ಗೌಡ ಸೇಡಿಯಾಪು ಅವರು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುಳ್ಯ ಕೆ.ವಿ.ಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‍ನ ನಿರ್ದೇಶಕ ಅಕ್ಷಯ್ ಕೆ.ಸಿ ಅವರು ಮಾತನಾಡಿ ಈ ಭಾಗದಲ್ಲಿ ನನಗೆ ಒಂದಷ್ಟು ಪರಿಚಯದ ಅಗತ್ಯವಿತ್ತು. ಆದರೆ ಇಂತಹ ಕ್ರೀಡಾ ಕೂಟದ ಮೂಲಕ ನಿಮ್ಮೊಂದಿಗೆ ಬೆರೆಯುವ ಅವಕಾಶ ಸಿಕ್ಕಿದೆ. ನನ್ನ ತಾತ ಕುರುಂಜಿ ವೆಂಕಟ್ರಮಣ ಗೌಡರನ್ನು ನೆನಪಿಸುತ್ತಿರುವ ಪುತ್ತೂರು ಸಮಾಜದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕು. ಈಗಾಗಲೇ ನಮ್ಮ ವಿದ್ಯಾಸಂಸ್ಥೆಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಟ್ಟು ಕಾಲೇಜಿನಲ್ಲಿ ಹಲವಾರು ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಮುಂದೆ ಪುತ್ತೂರಿನಲ್ಲಿ ಇಲ್ಲಿನ ಸಮಾಜದ ಬೇಡಿಕೆಯಂತೆ ಆಸ್ಪತ್ರೆಯನ್ನು ತೆರೆಯುವ ಉದ್ದೇಶವೂ ಇದೆ ಎಂದು ಹೇಳಿದರು.
ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಅವರು ಮುಖ್ಯಭಾಷಣ ಮಾಡಿದರು. ಪುತ್ತೂರು ವಲಯ ಯುವ ಗೌಡ ಸಂಘದ ಅಧ್ಯಕ್ಷ ಪೂವಪ್ಪ ದೇಂತಡ್ಕ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಮೀಷನರ್ ಫಾರ್ ಅಗ್ರಿಕಲ್ಚರಲ್‍ನ ಡೆಪ್ಯೂಟಿ ಡೈರೆಕ್ಟರ್ ಆಗಿರುವ ಡಾ. ಹರೀಶ್ ಕುಮಾರ್ ಕಲ್ಲೇಗ, ಕೆ.ವಿ.ಜಿ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‍ನ ನಿರ್ದೇಶಕ ಅಕ್ಷಯ್ ಕೆ.ಸಿ, ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಜಯಂತ್ ವೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಮಹಿಳಾ ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಡಿ ಗೌಡ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಅಧ್ಯಕ್ಷ ರಾಧಾಕೃಷ್ಣ ನಂದಿಲ, ವಲಯ ಉಸ್ತುವಾರಿ ಮಾಧವ ಗೌಡ ಪೆರಿಯತ್ತೋಡಿ, ಗೌಡ ಸಮುದಾಯದ ಮುಖಂಡರಾದ ಕುಶಾಲಪ್ಪ ಗೌಡ, ಕುಸುಮರಾಜ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಯುವರಾಜ್ ಪೆರಿಯತ್ತೋಡಿ ಸ್ವಾಗತಿಸಿದರು. ಯುವ ಒಕ್ಕಲಿಗ ಗೌಡ ಸಂಘ ಪಡ್ನೂರು ವಲಯದ ಕಾರ್ಯದರ್ಶಿ ನವೀನ್ ಮುಂಡಾಜೆ ವಂದಿಸಿದರು. ಪುತ್ತೂರು ವಲಯ ಯುವ ಒಕ್ಕಲಿಗ ಗೌಡ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮಾಧವ ಗೌಡ ಕಾಂತಿಲ ಕಾರ್ಯಕ್ರಮ ನಿರೂಪಿಸಿದರು.