ಸುಳ್ಯ – ಮತಾಂತರಗೊಂಡು ವಂಚನೆಗೊಳಗಾದ ಯುವತಿ – ಹಿಂದೂ ಸಂಘಟನೆಗಳ ಮುಖಂಡರ ಸಮ್ಮುಖ ಠಾಣೆಗೆ ದೂರು…
ಸುಳ್ಯ :ಪ್ರೀತಿಸಿ, ಮತಾಂತರವಾಗಿ ಸುಳ್ಯದ ಖಲೀಲ್ ಎಂಬಾತನ ಮದುವೆಯಾಗಿ ಮೋಸ ಹೋದ ಕೇರಳದ ಶಾಂತಿಜೂಬಿ ಯಾನೆ ಆಸಿಯಾ ನ.26 ರಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹಾಗೂ ದುರ್ಗಾವಾಹಿನಿ ತಂಡದ ಸದಸ್ಯರೊಂದಿಗೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಗೆ ಆಗಮಿಸಿ ನ್ಯಾಯಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿರುವ ಶಾಂತಿ ಎಂಬ ಯುವತಿಗೆ ಸುಳ್ಯದ ಖಲೀಲ್ ಎಂಬ ವ್ಯಕ್ತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ. ಬಳಿಕ ಪ್ರೀತಿಸಿ, ಅಂತಿಮವಾಗಿ ಶಾಂತಿಯನ್ನು ಮದುವೆಯಾದ ಖಲೀಲ್, ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರ ಕೂಡ ಮಾಡಿದ್ದ ಎನ್ನಲಾಗಿದೆ. ನಂತರ ಆಕೆಯನ್ನು ಆಸಿಯಾ ಎಂಬುವುದಾಗಿ ಹೆಸರು ಬದಲಾಯಿಸಿದ್ದ. ಆದರೆ, ಇದೀಗ ಖಲೀಲ್ ತನ್ನನ್ನು ತೊರೆದು ಹೋಗಿದ್ದಾನೆ ಇದಕ್ಕೆ ಆತನ ಸಹೋದರ ಕಾರಣ ಎಂದು ಆರೋಪಿಸಿ ಆತನ ವಿರುದ್ದ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೇಲ್ ಜತೆ ಆಗಮಿಸಿದ ಆಕೆ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸುದಿರ್ಘ ಚರ್ಚಿಸಿದ ಬಳಿಕ ದೂರು ನೀಡಿದರು. ಸ್ಥಳೀಯ ವಿಶ್ವಹಿಂದು ಪರಿಷತ್ ಬಜರಂಗದಳದ ಕೆಲವು ಮುಖಂಡರು, ದುರ್ಗವಾಹಿನಿಯವರು ಜತೆಗಿದ್ದರು
ನ.24 ರಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಾಂತಿಜೂಬಿ (ಆಸಿಯಾ), ತಾನು ಖಲೀಲ್ ನನ್ನು ಮದುವೆಯಾಗಿರುವ ಹಾಗೂ ಆ ಬಳಿಕ ನಡೆದ ಘಟನೆಯನ್ನೆಲ್ಲ ವಿವರಿಸಿದರು. ಇದು ಮಾಧ್ಯಮಗಳ ಮೂಲಕ ಮತ್ತೆ ಜೀವ ಪಡೆಯಿತು.
ಗುರುವಾರ ಸಂಜೆ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ದುರ್ಗಾವಾಹಿನಿ ತಂಡದ ಸದಸ್ಯರ ಜತೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಆಸಿಯಾ ಆಗಮಿಸಿ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಯಲ್ಲಿ ಇನ್ ಸ್ಪೆಕ್ಟರ್ ನವೀಚಂದ್ರ ಜೋಗಿ ಅವರೊಂದಿಗೆ ಮಾತುಕತೆ ನಡೆಸಿದರು.ಇನ್ ಸ್ಪೆಕ್ಟರ್ ಈ ಹಿಂದೆ ಅವರು ಕೈ ಗೊಂಡ ಕ್ರಮಗಳು ಹಾಗೂ ಈಗ ನ್ಯಾಯಾಲಯದ ಮೆಟ್ಟಲೇರಿರುವ ಬಗ್ಗೆ ವಿವರಿಸಿದರು. ಆಕೆ ಖಲೀಲ್ ವಿರುದ್ದ ದೂರು ನೀಡುವುದಿಲ್ಲ. ನೀಡಿದರೆ ನಾವು ಸ್ವೀಕರಿಸುತ್ತೇವೆ ಎಂದು ಹೇಳಿದರೆಂದೂ, ನಾನು ಖಲೀಲ್ ಮೇಲೆ ದೂರು ನೀಡುವುದಿಲ್ಲ, ಅವನ ಜತೆ ಬಾಳಲು ಅವಕಾಶ ಬೇಕು ಎಂದು ಆಕೆ ಹೇಳಿದಳೆಂದೂ ಈ ಕುರಿತು ಚರ್ಚೆ ನಡೆದು ಬಳಿಕ ಆಸಿಯಾ ತನಗೆ ತನ್ನ ಗಂಡ ಖಲೀಲ್ ಸಹೋದರ ಅವಾಚ್ಯವಾಗಿ ಬೈದಿರುವ ಬಗ್ಗೆ ಲಿಖಿತ ಹೇಳಿಕೆ ಪೋಲೀಸರಿಗೆ ನೀಡಿದ್ದಾರೆ.
ಬಳಿಕ ಮಾಧ್ಯಮದ ಜತೆ ಮಾತನಾಡಿದ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಅವರು “ಓರ್ವ ಹಿಂದೂ ಯುವತಿ ಪ್ರೀತಿಯ ಮೋಸದ ಬಲೆಗೆ ಬಿದ್ದು ಅನ್ಯಾಯಕ್ಕೆ ಒಳಗಾದ ವಿಚಾರ ತಿಳಿದು ಆಕೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸುಳ್ಯದ ಸರ್ಕಲ್ ಇನ್ ಸ್ಪೆಕ್ಟರ್ ರವರೊಂದಿಗೆ ಮಾತುಕತೆ ನಡೆಸಿದ್ದೇವೆ. ಲವ್ ಜಿಹಾದ್ ನ ಮೂಲಕ ಮೋಡಿ ಮಾಡಿ ನಂಬಿಸಿ ಮದುವೆಯಾಗಿ ಸುಮಾರು ಮೂರುವರೆ ವರ್ಷ ಕಾಲ ಒಟ್ಟಿಗಿದ್ದು ದೈಹಿಕ ಸಂಪರ್ಕ ಬೆಳೆಸಿ ಇದೀಗ ಆಕೆಯನ್ನು ಗಂಡನ ಕುಟುಂಬದವರು ಮನೆಯಿಂದ ಹೊರಗೆ ಹಾಕಿ ದೌರ್ಜನ್ಯವೆಸಗಿರುವುದು ಖಂಡನೀಯ. ಆಕೆಯ ಗಂಡನ ಸಹೋದರ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ಮಾನಸಿಕ ಹಿಂಸೆ ನೀಡಿರುವುದರ ಬಗ್ಗೆ ಪೋಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಪೋಲೀಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಶೋಷಣೆಗೆ ಒಳಗಾದ ಮಹಿಳೆಗೆ ನ್ಯಾಯ ಒದಗಿಸಿಕೊಡುವಂತೆ ಸಂಘಟನೆಯ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.