ಯಕ್ಷಗಾನ ಕಲಾವಿದ ಪುತ್ತೂರಿನ ಡಾ.ಶ್ರೀಧರ್ ಭಂಡಾರಿಗೆ ರಾಜ್ಯೋತ್ಸವ ಪ್ರಶಸ್ತಿ….

ಪುತ್ತೂರು: ಲಿಮ್ಕಾ ದಾಖಲೆಯ ಯಕ್ಷಗಾನ ಕಲಾವಿದ ಪುತ್ತೂರಿನ ಡಾ. ಶ್ರೀಧರ್ ಭಂಡಾರಿ(75) ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿರುವ ಶ್ರೀಧರ್ ಭಂಡಾರಿ ಅವರನ್ನು ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ 2019-20ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕಲಾವಿದ ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಯ ಪುತ್ರರಾಗಿರುವ ಶ್ರೀಧರ್ ಭಂಡಾರಿ 1945 ಆಗಸ್ಟ್ 1ರಂದು ಜನಿಸಿದ್ದರು. ತನ್ನ 11ನೇ ವಯಸ್ಸಿನಲ್ಲಿಯೇ ತನ್ನ ತಂದೆ ಶೀನಪ್ಪ ಭಂಡಾರಿ ಅವರಿಂದ ಯಕ್ಷಗಾನ ತರಬೇತಿ ಪಡೆದು 1963ರಲ್ಲಿ ತನ್ನ 18ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ತನ್ನ ಕಲಾ ವೃತ್ತಿ ಜೀವನ ಆರಂಭಿಸಿದ್ದರು. ಸುಮಾರು 18 ವರ್ಷಗಳ ಕಾಲ ಈ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. 1981ರಿಂದ 1988ರ ತನಕ ತನ್ನ ಸ್ವಂತ ಮೇಳವಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಮೇಳವನ್ನು ಮುನ್ನಡೆಸಿದ್ದರು. 1988ರಲ್ಲಿ ಕಾಂತಾವರ ಮೇಳ ಕಟ್ಟಿಕೊಂಡು 11 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.
ಅವರ ಸೇವೆಯನ್ನು ಪರಿಗಣಿಸಿ ಅಮೇರಿಕಾದ ಬೋಸ್ಟರ್ನ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ತಮ್ಮ 62 ನೇ ವಯಸ್ಸಿನಲ್ಲಿ ಯಕ್ಷ ನೃತ್ಯದಲ್ಲಿ 1 ನಿಮಿಷದಲ್ಲಿ 148 ಸುತ್ತು ಹಾರುವ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ವಿನೂತನ ಲಿಮ್ಕಾ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ. ಕಳೆದ ಸುಮಾರು 6 ದಶಕಗಳಿಂದ ನಿರಂತರ ಯಕ್ಷಗಾನ ಕಲಾ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. 2016ರಲ್ಲಿ ಪುತ್ತೂರಿನ ನಾಡಹಬ್ಬ ಸಂಭ್ರಮದಲ್ಲಿ ಅವರಿಗೆ ಪುತ್ತೂರಿನ ಯಕ್ಷರಂಗವು ಉತ್ತಮ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಿತ್ತು.

Sponsors

Related Articles

Leave a Reply

Your email address will not be published. Required fields are marked *

Back to top button