ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ‘ವಿವೇಕ ಜೀವವರ್ಧಕ’ ಕೊಡುಗೆ…

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಅವರ ವಿಶೇಷ ಆಸ್ಥೆಯಿಂದ ನಿರ್ಮಿಸಿದ ‘ವಿವೇಕ ಜೀವವರ್ಧಕ’ ಕೃತಕ ಉಸಿರಾಟದ ಸಾಧನವನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
ಕಾಲೇಜು ಉಪನ್ಯಾಸಕರಾದ ಪ್ರೊ.ಶ್ರೀಕಾಂತ್ ರಾವ್, ಪ್ರೊ.ಸುದರ್ಶನ್ ಎಂ ಎಲ್ ಮತ್ತು ಪ್ರೊ.ವೆಂಕಟೇಶ್ ಅವರು ಜಿಲ್ಲಾ ಸರ್ಜನ್ ಡಾ.ಸದಾಶಿವ ಅವರಿಗೆ ಇದನ್ನು ಹಸ್ತಾಂತರಿಸಿದರು. ಅರಿವಳಿಕೆ ತಜ್ಞೆ ಡಾ.ಜೆಸಿಂತಾ ಈ ಸಂದರ್ಭದಲ್ಲಿ ಹಾಜರಿದ್ದರು. ಅಮೇರಿಕಾದಲ್ಲಿ ನೆಲಸಿರುವ ಅನಿವಾಸಿ ಭಾರತೀಯ ಮಿತ್ರರು ಜತೆ ಸೇರಿ ಈ ಉಪಕರಣಕ್ಕೆ ಬೇಕಾದ ಧನಸಂಗ್ರಹಣೆಯನ್ನು ಮಾಡಿ ಈ ಕೃತಕ ಉಸಿರಾಟ ಸಾಧನವನ್ನು ಸರ್ಕಾರೀ ಆಸ್ಪತ್ರೆಗಳಿಗೆ ನೀಡುವ ಮಹತ್ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನ್ಯೂಜೆರ್ಸಿಯ ಹೈಸ್ಕೂಲ್ ವಿದ್ಯಾರ್ಥಿಗಳಾದ ಭಕ್ತಿ ಹೆಗಡೆ, ಅನನ್ಯ ಭಟ್ ಮತ್ತು ಪ್ರಣವ ಜೋಷಿ ಇವರು ಆನ್ ಲೈನ್ ಮೂಲಕ ಲಘು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನಡೆಸಿ ಧನ ಸಂಗ್ರಹಕ್ಕೆ ಚಾಲನೆ ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.