ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ…
ಯಕ್ಷಗಾನದಿಂದ ಧಾರ್ಮಿಕ ಪ್ರಜ್ಞೆ: ಆಸ್ರಣ್ಣ...
ಬಂಟ್ವಾಳ: ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಬೊಂಡಾಲದಲ್ಲಿ ಏರ್ಪಡಿಸಿದ್ದ ಕಟೀಲು ಮೇಳದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ‘ಧಾರ್ಮಿಕ ಪ್ರಜ್ಞೆ ಯಕ್ಷಗಾನದಿಂದ ಸಿಗುತ್ತದೆ, ಜನರೆಲ್ಲ ಸತ್ಕರ್ಮಾಚರಣೆಯಿಂದ ಸತ್ಯಮಾರ್ಗದಲ್ಲಿ ನಡೆದರೆ ಬದುಕು ಸುಗಮ’ ಎಂದರು.
ವೇ.ಮೂ.ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ‘ಬೊಂಡಾಲ ಮನೆಯವರು ಹಿರಿಯರು ಹಾಕಿದ ಮಾರ್ಗವನ್ನು ಮುಂದುವರೆಸುತ್ತಿದ್ದಾರೆ. ಹರಕೆಯ ಬಯಲಾಟದ ಜೊತೆಗೆ ಕಲಾವಿದರನ್ನು ಗೌರವಿಸುವುದು ಸತ್ಸಂಪ್ರದಾಯ ‘ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿ ‘ಬೊಂಡಾಲ ಬಂಧುಗಳ ಸಾಮಾಜಿಕ ಕಾಳಜಿ ಮತ್ತು ಕಲಾ ಪ್ರೇಮ ಪ್ರಶಂಶನೀಯ’ ಎಂದರು.
ಬಂಟ್ವಾಳ ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ಮತ್ತು ಧಾರ್ಮಿಕ ಪರಿಷತ್ ನಾಮನಿರ್ದೇಶಿತ ಸದಸ್ಯ ಬಡಾಜೆಗುತ್ತು ರವಿಶಂಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಹಾಗೂ ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸುನಾದ್ ರಾಜ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಟ್ರಸ್ಟ್ ಅದ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.
ಸೇವಾ ಬಯಲಾಟ:
ಫೆಬ್ರವರಿ 19ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ ‘ಕಲಿ ಕೀಚಕ’ ಹಾಗೂ 20ರಂದು ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀದೇವಿ ಮಹಾತ್ಮೆ’ ಸೇವಾ ಬಯಲಾಟ ಜರಗಿತು.




