ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಸ್ವಯಂಪ್ರೇರಿತ ರಕ್ತದಾನ ಶಿಬಿರ…
ಪುತ್ತೂರು: ರಕ್ತಕ್ಕೆ ರಕ್ತವೇ ಪರ್ಯಾಯ ಹೊರತು ಅದನ್ನು ಅದನ್ನು ಕೃತಕವಾಗಿ ತಯಾರಿಸಲಾಗದು. ವ್ಯಕ್ತಿಯೊಬ್ಬನ ಅಮೂಲ್ಯ ಜೀವವನ್ನು ಉಳಿಸುವ ರಕ್ತದಾನದ ಕಾರ್ಯ ಅತ್ಯಂತ ಮಹತ್ವದ್ದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ.ಸಿಂಧೂಜಾ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್‍ಎಸ್‍ಎಸ್ ಮತ್ತು ರೆಡ್‍ಕ್ರಾಸ್ ಘಟಕ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ 5.5 ರಿಂದ 6 ಲೀಟರ್ ರಕ್ತವಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿಲಿಲೀಟರ್ ರಕ್ತವನ್ನು ಮಾತ್ರ ಸ್ವೀಕರಿಸಲಾಗುವುದು. ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನ ಮಾಡಬಹುದು. ಲಿವರ್, ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ರಕ್ತಹೀನತೆ, ಕ್ಯಾನ್ಸರ್, ಕ್ಷಯ, ಅಪಸ್ಮಾರ, ಅಧಿಕ ರಕ್ತದೊತ್ತಡದ ತೊಂದರೆ ಇರುವವರು ರಕ್ತದಾನ ಮಾಡಬಾರದು. ರಕ್ತದಾನದ ಬಳಿಕ ಒಂದು ತಾಸಿನ ವಿಶ್ರಾಂತಿ ಪಡೆಯಬೇಕು. ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಿ ಆರೋಗ್ಯವಂತರಾಗಿರಬಹುದು ಎಂದು ಹೇಳಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ರಕ್ತದ ಆವಶ್ಯಕತೆ ಯಾರಿಗೆ ಯಾವಾಗ ಬರಬಹುದು ಎನ್ನುವುದನ್ನು ಊಹಿಸಲು ಸಾಧ್ಯವೇ ಇಲ್ಲ ಮಾರಣಾಂತಿಕವಾದ ಸಮಯದಲ್ಲಿ ಆವಶ್ಯಕತೆಯನ್ನರಿತು ರಕ್ತ ನೀಡುವುದು ಅತಿಶ್ರೇಷ್ಠವಾದದ್ದು. ಸ್ವಯಂಪ್ರೇರಿತವಾಗಿ ರಕ್ತದಾನಮಾಡಿದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಈ ಕಾರ್ಯವು ಮೆಚ್ಚುವಂತದ್ದು. ಸಮಾಜಮುಖೀ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಕಾಲೇಜು ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಕಾಲೇಜಿನ ಎನ್‍ಎಸ್‍ಎಸ್ ಮತ್ತು ರೆಡ್‍ಕ್ರಾಸ್ ಘಟಕದ ಸಂಯೋಜಕಿ ಪ್ರೊ. ನಿಶಾ.ಜಿ.ಆರ್ ವಂದಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.