ದೇವಿನಗರ:ಇಂದಿನಿಂದ (ಮಾ.31) ಮಹಾಮ್ಮಾಯಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ…

ಬಂಟ್ವಾಳ: ಮೂಡನಡುಗೋಡು ಗ್ರಾಮದ ದಡ್ಡಲಕಾಡು ದೇವಿನಗರ ಶ್ರೀ ಜಗದಂಬಿಕಾ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರವು ರೂ 30ಲಕ್ಷ ವೆಚ್ಚದಲ್ಲಿ ಪುನರ್ ನವೀಕರಣಗೊಂಡಿದ್ದು, ತಂತ್ರಿ ವಿದ್ಯಾಶಂಕರ ಭಟ್ ಮತ್ತು ಪುರೋಹಿತ ಸತ್ಯನಾರಾಯಣ ಭಟ್ ಇಜ್ಜ ಇವರ ಮಾರ್ಗದರ್ಶನದಲ್ಲಿ ದೇವರ ಬಿಂಬ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಹಾಗೂ ಚಂಡಿಕಾಯಾಗ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ್ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಗಾಗಲೇ ಸೋಮವಾರ ಬಂಟ್ವಾಳದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆದಿದ್ದು, ಮಾ.31ರಂದು ತಂತ್ರಿವರ್ಯರ ಆಗಮನ ಮತ್ತು ಮಂಟಪ ಶುದ್ಧಿ ಸಹಿತ ವಾಸ್ತುಪೂಜೆ ನಡೆಯಲಿದೆ. ಅಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ಮತ್ತು ರಾತ್ರಿ 8 ಗಂಟೆಗೆ ಬೆದ್ರ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು. ಏ.1ರಂದು ಬೆಳಿಗ್ಗೆ ಗಂಟೆ 7ರಿಂದ ವಿವಿಧ ಧಾರ್ಮಿಕ‌ವಿಧಿ ವಿಧಾನ ಸಹಿತ ಸಂಜೆ 5 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಏ.2ರಂದು ಬೆಳಿಗ್ಗೆ ಗಂಟೆ 9.40ಕ್ಕೆ ದೇವರ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ ಗಂಟೆ 12.30ಕ್ಕೆ ನಡೆಯುವ ‘ಸುಧರ್ಮ ಸಭೆ’ಗೆ ಮಹರ್ಷಿ ಆನಂದ ಗುರೂಜಿ ಸಹಿತ ಆರ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಬಿಜೆಪಿ ನಾಯಕಿ ಸುಲೋಚಬಾ ಜಿ.ಕೆ.ಭಟ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಮತ್ತಿತರ ಗಣ್ಯರು ಭಾಗವಹಿಸುವರು. ಅಂದು ಸಂಜೆ ತಾಂಬೂಲ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಏ. 3ರಂದು ಬೆಳಿಗ್ಗೆ ಗಂಟೆ 7ರಿಂದ ಗಣಪತಿ ಹವನ, ದೇವರಿಗೆ ನವಕ ಕಲಶಾಭಿಷೇಕ, ಪರಿವಾರ ದೈವಗಳಿಗೆ ಕಲಶಾಭಿಷೇಕ, 9 ಗಂಟೆಗೆ ಚಂಡಿಕಾ ಯಾಗ, ದೇವಿಗೆ 108 ಸೀಯಾಳಾಭಿಷೇಕ, 12 ಗಂಟೆಗೆ ಪೂಣರ್ಾಹುತಿ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತಪ್ಣೆ ನಡೆಯಲಿದೆ. ಅಂದು ರಾತ್ರಿ ಗಂಟೆ 9.30ಕ್ಕೆ ಸಸಿಹಿತ್ಲು ಮೇಳದಿಂದ ‘ಭಗವತಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಏ.4ರಂದು ರಾತ್ರಿ ಗಂಟೆ 8ರಿಂದ ‘ಮಾರಿ ಪೂಜಾ ಉತ್ಸವ’ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕ ದಾಮೋದರ ಜೆ.ಡಿ.ದೇವಿನಗರ ಇದ್ದರು.

Related Articles

Back to top button