ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯಿಂದ ಕ್ರೈಸ್ತರಿಗೆ ನೋವಾಗಿದೆ-ಐವನ್ ಡಿಸೋಜ…

ಮಂಗಳೂರು: ಕಪಾಲಬೆಟ್ಟದಲ್ಲಿ ಯೇಸು ಕ್ರಿಸ್ತರ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿ ಕನಕಪುರದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್, ಸಮುದಾಯಕ್ಕೆ ನೋವಾಗುವಂತೆ ನಡೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇವರಿಗೆ ಯಾವ ಜಾಗವೂ ಬೇಕಾಗಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ಅವರು ನೀಡಿರುವ ಹೇಳಿಕೆ ಪ್ರಪಂಚದಾದ್ಯಂತ ಇರುವ ಸಮುದಾಯದ ಜನರಿಗೆ ಮಾನಸಿಕ ವೇದನೆಯನ್ನು ನೀಡಿದೆ ಎಂದು ಐವನ್ ಡಿಸೋಜಾ ಹೇಳಿದ್ದಾರೆ.
ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತರ ಪ್ರತಿಮೆ ಸ್ಥಾಪನೆ ಅಕ್ರಮ ಎಂದಾದರೆ ಆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರ ಮನೆಯ ಎದುರಲ್ಲೋ ಅಥವಾ ವಿಧಾನಸಭೆಯ ಎದುರೋ ಪ್ರತಿಭಟಿಸಬಹುದಿತ್ತು. ಆದರೆ ಈ ರೀತಿ ರಾಜಕೀಯ ಮಾಡಿ ಗೊಂದಲ ಸೃಷ್ಟಿಸಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಸಂವಿಧಾನ ವಿರೋಧಿ ಎಂದು ಅವರು ಹೇಳಿದರು.
ಇನ್ನು ಗೃಹ ಸಚಿವ ಅಮಿತ್ ಶಾ ಎನ್‌ಆರ್‌ಸಿ ಕುರಿತಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿರುವುದರ ಕುರಿತು ಸ್ಪಷ್ಟೀಕರಣ ನೀಡಬೇಕು ಇಲ್ಲವೇ ಕ್ಷಮೆಯಾಚಿಸಬೇಕು ಎಂದ ಅವರು, ಮಂಗಳೂರಿಗೆ ಅಮಿತ್ ಶಾ ಬರುವುದರ ವಿರುದ್ಧ ಗೋ ಬ್ಯಾಕ್ ಎಂಬ ಕಾರಣಕ್ಕೋ ಅಥವಾ ಅವರಿಗೆ ಸಮಯ ಹೊಂದಿಕೆ ಆಗಿಲ್ಲ ಎಂಬ ಕಾರಣಕ್ಕೋ ಅವರ ಮಂಗಳೂರು ಪ್ರವಾಸ ಸದ್ಯ ರದ್ದಾಗಿದೆ. ಇದೀಗ ರಾಜ್ಯಕ್ಕೆ ಜ.17- 18ರಂದು ಭೇಟಿ ನೀಡಲಿರುವ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ರಾಜ್ಯಗಳಲ್ಲಿ ಎನ್‌ಆರ್‌ಸಿ ಅನುಷ್ಠಾನಗೊಳಿಸಲು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದರೆ, ಅಮಿತ್ ಶಾ ಅನುಷ್ಠಾನಗೊಳಿಸುವುದರಲ್ಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಅವರು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು ಅಥವಾ ಪ್ರಧಾನಮಂತ್ರಿ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದರು.