ಮಂಗಳೂರು ಗೋಲಿಬಾರ್- ಪ್ರಗತಿಪರ ಸಂಘಟನೆಗಳ ವತಿಯಿಂದ ಧರಣಿ…..
ಮಂಗಳೂರು : ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿರೋಧಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಗುರುವಾರ ಮಂಗಳೂರಿನ ಟೌನ್‌ಹಾಲ್ ಮುಂಭಾಗ ಧರಣಿ ಆಯೋಜಿಸಲಾಗಿತ್ತು.
ಈ ಧರಣಿಯಲ್ಲಿ ಪಾಲ್ಗೊಳ್ಳಲು ಮಾಜಿ ಸಚಿವ ಬಿ.ರಮಾನಾಥ ರೈ ಕೆಲವು ಬೆಂಬಲಿಗರೊಂದಿಗೆ ಬಂಟ್ವಾಳದಿಂದ ಖಾಸಗಿ ಬಸ್‌ನಲ್ಲಿ ಆಗಮಿಸಿ, ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರಲಾಗುತ್ತಿದೆ. ಇದರ ವಿರುದ್ಧ ಜಾತ್ಯಾತೀತ ಸಂಘಟನೆಗಳು ಒಂದಾಗಿ 2 ನೇ ಸ್ವಾತಂತ್ಯ್ರ ಹೋರಾಟ ನಡೆಸಬೇಕಾಗಿದೆ ಎಂದರು.ಹೋರಾಟಕ್ಕೆ ಜನರೇ ಬುನಾದಿಯಾಗಿದ್ದಾರೆ. ನಾವು ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಬೇಕು.ಮಂಗಳೂರಿನಲ್ಲಿ ನಡೆದ ಘಟನೆಗಳಿಗೆ ಕಾರಣ ಯಾರು? ತಪ್ಪಿತಸ್ಥರು ಯಾರು? ಎಂಬುದು ಸ್ಪಷ್ಟವಾಗಿ ತಿಳಿಯ ಬೇಕಾದರೆ ನ್ಯಾಯಾಂಗ ತನಿಖೆ ನಡೆಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಘಟನೆಗೆ ಕಾಂಗ್ರೆಸ್ ಕಾರಣ ಎಂಬ ಆರೋಪಗಳನ್ನು ಮಾಡಲಾಗುತ್ತಿದ್ದು ಸತ್ಯ ತಿಳಿಯ ಬೇಕಾದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಆಗ್ರಹ ಮಾಡಿದರು.ಈ ಘಟನೆ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ, ನಮ್ಮ ಹೋರಾಟ ಅಧಿಕಾರಶಾಹಿ ವಿರುದ್ಧವಾದುದಲ್ಲ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಎಂದರು.