ಸಂದೇಶ ಪ್ರಶಸ್ತಿ ಪ್ರಕಟ – ಬೊಳುವಾರು ಮಹಮ್ಮದ್ ಕುಂಞಿ ಸೇರಿದಂತೆ 7 ಮಂದಿಗೆ ಪ್ರಶಸ್ತಿ…..
ಮಂಗಳೂರು: ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಸೇರಿದಂತೆ 7 ಮಂದಿಗೆ ಪ್ರಸಕ್ತ (2020ನೇ) ಸಾಲಿನ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ ನೀಡಲಾಗುವುದು ಎಂದು ಸಂದೇಶ ಪ್ರಶಸ್ತಿ ಸಮಿತಿಯ ಅಧ್ಯಕ್ಷ ನಾ.ಡಿ.ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ಬೊಳುವಾರು ಅವರ ‘ಸ್ವಾತಂತ್ರದ ಓಟ’ ಕಾದಂಬರಿ ಆಯ್ಕೆಯಾಗಿದೆ ಎಂದವರು ವಿವರಿಸಿದರು.‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ’ಗೆ ವಲೇರಿಯನ್ ಡಿಸೋಜ (ವಲ್ಲಿ ವಗ್ಗ), ಶಿವ ಕುಮಾರ್ ಅವರಿಗೆ ‘ಸಂದೇಶ ಮಾಧ್ಯಮ ಪ್ರಶಸ್ತಿ’, ಹೆಲೆನ್ ಡಿ ಕ್ರೂಝ್ ಅವರಿಗೆ ‘ಸಂದೇಶ ಕೊಂಕಣಿ ಪ್ರಶಸ್ತಿ’, ಡಾ.ಕೆ.ಎಸ್.ಪವಿತ್ರಾರಿಗೆ ‘ಸಂದೇಶ ಕಲಾ ಪ್ರಶಸ್ತಿ’, ಜುಸ್ತಿನಾ ಡಿಸೋಜರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’ ಹಾಗೂ ವಿನ್ಸೆಂಟ್ ಪ್ರಕಾಶ್ ಕಾರ್ಲೋ ಅವರಿಗೆ ‘ಸಂದೇಶ ವಿಶೇಷ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ನಾ.ಡಿ.ಸೋಜ ತಿಳಿಸಿದ್ದಾರೆ.
ಪ್ರಶಸ್ತಿಯು 25,000 ನಗದು ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ. ಫೆಬ್ರವರಿ 9ರಂದು ಸಂಜೆ 5 ಗಂಟೆಗೆ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದವರು ಹೇಳಿದರು.ಇದೇ ಸಂದರ್ಭದಲ್ಲಿ ಸಂದೇಶ ಹೆಸರಿನ ಗೃಹ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂದೇಶ ನಿರ್ದೇಶಕರಾದ ಫಾ.ಫ್ರಾನ್ಸಿಸ್ಸ್ ಅಸ್ಸಿಸಿ, ಟ್ರಸ್ಟಿ ರೋಯ್ ಕಾಸ್ತೆಲಿನೋ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.