ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಶ್ರದ್ಧಾಂಜಲಿ…..
ಪುತ್ತೂರು: ವಿಶ್ವವಂದ್ಯ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಧಾರ್ಮಿಕವಾಗಿಯಷ್ಟೇ ಅಲ್ಲ ಸಾಮಾಜಿಕವಾಗಿಯೂ ನಿರಂತರ ಚಟುವಟಿಕೆಗಳಿಂದ ಕೂಡಿದ್ದರು, ಹಲವು ಧಾರ್ಮಿಕ, ಸಾಮಾಜ ಸೇವಾ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಏಳಿಗೆಗೆ ಶ್ರಮಿಸಿದ್ದರು ಎಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತಾಡಿದರು. ವೈಚಾರಿಕ ಸಂಘರ್ಷಗಳು ಏರ್ಪಟ್ಟಾಗ ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಅದನ್ನು ಸಮರ್ಥವಾಗಿ ಪರಿಹರಿಸುತ್ತಿದ್ದರು. ಅವರ ಸೌಜನ್ಯಶೀಲ ಗುಣ ವಿನಯವಂತಿಕೆ ಎಲ್ಲರಿಗೂ ಆದರ್ಶಪ್ರಾಯ ಎಂದರು. ಜನಸಾಮಾನ್ಯರೊಂದಿಗೆ ಅವರು ಬೆರೆಯುತ್ತಿದ್ದ ರೀತಿ, ವಿವಿಧ ಧರ್ಮ ಪಂಥಗಳೊಂದಿಗೆ ಅವರಿಗಿದ್ದ ಸೌಹಾರ್ಧ ಸಂಬಂಧ ಅವರನ್ನು ಇನ್ನಷ್ಟು ಎತ್ತರಕ್ಕೇರಿಸಿತು ಎಂದರು. ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಶ್ರೀಗಳ ಯೋಜನೆಗಳನ್ನು ಕಾರ್ಯಗತಗೊಳಿಸಿ ಮುಂದುವರಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸೋಣ ಎಂದರು.
ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಮುಂದಾಲೋಚನೆ ಇಲ್ಲದೆ ಯಾವ ಕಾರ್ಯವನ್ನು ಸ್ವಾಮಿಗಳು ಮಾಡಿದವರಲ್ಲ, ಹೀಗಾಗಿ ಅದಕ್ಕೆ ಏನೇ ಎಡರು ತೊಡರುಗಳು ಬಂದರೂ ಕಂಗೆಡದೆ ಅದನ್ನು ಪರಿಹರಿಸುತ್ತಿದ್ದರು ಎಂದರು. ಅಗತ್ಯಬಿದ್ದಾಗ ನಿದ್ರಾಹಾರಗಳನ್ನು ತ್ಯಜಿಸಿ ಪೂಜೆ ಪ್ರಾರ್ಥನೆಗಳೊಂದಿಗೆ ಕಾರ್ಯಗಳನ್ನು ಸಾಧಿಸುತ್ತಿದ್ದರು ಎಂದರು. ಪ್ರಜಾಪ್ರಭುತ್ವದ ಮೇಲೆ ಅವರಿಗೆ ಅಪಾರ ನಂಬಿಕೆ ಇತ್ತು. ಸಮಾಜದ ಏಳಿಗೆಯು ಪೂಜೆಯಷ್ಟೇ ಪವಿತ್ರವೆಂದು ಅವರು ನಂಬಿದ್ದರು ಎಂದು ನುಡಿದರು. ವಿವೇಕಾನಂದ ಸಂಸ್ಥೆಗಳೊಂದಿಗೆ ಅವರು ನಿಕಟ ಸಂಪರ್ಕವನ್ನು ಹೊಂದಿದ್ದರು. ಬದುಕು ಅಮೂಲ್ಯವಾದುದು ಅದನ್ನು ಹಾಳುಮಾಡಬೇಡಿ ಎನ್ನುವ ಸಂದೇಶವನ್ನು ನೀಡಿದ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದೇ ಅವರಿಗೆ ನಾವು ನೀಡಬಹುದಾದ ಗೌರವ ಎಂದರು.
ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರು, ವಿಭಾಗ ಮುಖ್ಯಸ್ಥರು, ಮತ್ತು ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಸ್ವಾಗತಿಸಿದರು.