ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್; ರಾಜಕೀಯ ಲಾಭಕ್ಕಾಗಿ ವಿರೋಧ – ನಳಿನ್ ಕುಮಾರ್ ಕಟೀಲ್….
ಮಂಗಳೂರು: ಕೊರೊನದಿಂದಾಗಿ ಲಾಕ್ ಡೌನ್ ಜಾರಿಯಲ್ಲಿದ್ದು, ರಾಜ್ಯದ ಅನೇಕ ವಲಯದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಮೆ ಇಲ್ಲದೆ ನಷ್ಟವಾಗಿದ್ದು, ಈ ವರ್ಗದ ಜನರನ್ನು ಮತ್ತೆ ಆರ್ಥಿಕವಾಗಿ ಮುನ್ನೆಲೆಗೆ ತರುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರಮಿಕ ವರ್ಗಕ್ಕೆ ನೀಡಿರುವ ಪ್ಯಾಕೇಜನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿರುವುದು ಸರಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ಅಡಿಯಲ್ಲಿ ಮುಖ್ಯಮಂತ್ರಿ ಯಡ್ಯೂರಪ್ಪನವರು ಸಾಮಾಜಿಕ ನ್ಯಾಯವನ್ನು ನೀಡುವ ಕೆಲಸವನ್ನು ಮಾಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಹಲವು ಬಜೆಟ್ ಗಳನ್ನು ಮಂಡಿಸಿರುವ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ನವರು ಟೀಕೆಯನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿ, ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರಿಗೆ ಹೂವಿನ ಬೆಳೆಗೆ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಒಂದು ಎಕ್ರೆಗೆ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿರುವುದು ನೋಡಿದರೆ ರಾಹುಲ್ ಗಾಂಧಿಯವರು ಆಲೂಗಡ್ಡೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಂತಿದೆ ಎಂದರು.
ಸಿಎಂ ಆಗಿ ಅನುಭವ ಹೊಂದಿದ್ದ ಹಾಗೂ ರಾಜ್ಯದ ಸ್ಥಿತಿಗತಿ ಚೆನ್ನಾಗಿ ತಿಳಿದುಕೊಂಡಿದ್ದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿರುವಂತ ಯೋಜನೆಯನ್ನು ಸ್ವಾಗತ ಮಾಡಬೇಕಾಗಿತ್ತು. ಅದು ಬಿಟ್ಟು ರಾಜ್ಯ ಸಂಕಷ್ಟದಲ್ಲಿರುವಾಗ, ಜನ ಕಣ್ಣೀರಿಡುವಂತಹ ಸಮಯದಲ್ಲಿ ರಾಜಕೀಯ ಮಾಡುವಂತ ಹೇಯ ಕೃತ್ಯವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದೂ ಕಟೀಲ್ ಹೇಳಿದ್ದಾರೆ.