ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳು ಮತ್ತು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ…
ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಗರಿಕರ ಅನುಕೂಲಕ್ಕಾಗಿ ರಚಿಸಲಾದ ವಿವಿಧ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದನ್ನು ಇತರರಿಗೂ ತಿಳಿಹೇಳಬೇಕು ಎಂದು ಪುತ್ತೂರು ನಗರ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಶ್ರೀಕಾಂತ್ ರಾಠೋಡ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಅಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಕುಂದುಕೊರತೆ ನಿವಾರಣಾ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಉದ್ದೀಪನಾ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳು ಮತ್ತು ಸಂಚಾರಿ ನಿಯಮಗಳು ಈ ವಿಷಯದ ಬಗ್ಗೆ ಮಾತನಾಡಿದರು.
ಸಾಮಾಜಿಕ ಜಾಲತಾಣಗಳನ್ನು ಅತೀ ಜಾಗ್ರತೆಯಾಗಿ ಬಳಸಬೇಕು. ಅಲ್ಲಿ ಬರುವ ಲಿಂಕ್‍ಗಳನ್ನು ಬಳಸುವಾಗ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕು. ಇಲ್ಲವಾದರೆ ಅನಾವಶ್ಯಕ ತೊಂದರೆಗೆ ಸಿಲುಕುವ ಸಾಧ್ಯತೆಗಳಿವೆ ಎಂದ ಅವರು ಸಂಚಾರಿ ನಿಯಮಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮಾಡಲಾಗಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಇದು ನಿಮ್ಮ ಜೀವ ಮತ್ತು ಜೀವನದ ಸುರಕ್ಷತೆಗೆ ಮಾಡಿರುವ ನಿಯಮ. ಇದನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಉತ್ತಮ ವಿದ್ಯಾರ್ಥಿಯಾಗುವುದರ ಜತೆಯಲ್ಲಿ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದು ಪ್ರಜ್ಞಾವಂತ ನಾಗರಿಕರಾಗಬೇಕೆಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರೊ.ಮಾಧವಿ.ಆರ್.ಪೈ ಸ್ವಾಗತಿಸಿ, ಡಾ.ಚೇತನ್.ಪಿ.ಡಿ ವಂದಿಸಿದರು.