ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ಆ. 9 ರಂದು ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2025…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಐಇಇಇ ವಿದ್ಯಾರ್ಥಿ ವಿಭಾಗ, ಗ್ಲೋಬಲ್ ಡಿಗ್ರೀಸ್ ಮಣಿಪಾಲ್, ಇನ್ಸ್ಟಿಟ್ಯೂಶನ್ಸ್ ಇನ್ನೋವೇಶನ್ ಸೆಲ್ ಮತ್ತು ಕೆನರಾ ಬ್ಯಾಂಕ್ ಇದರ ಸಂಯುಕ್ತ ಆಶ್ರಯದಲ್ಲಿ ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ ಎನ್ನುವ ಕುರಿತು 3 ನೇ ಅಂತಾರಾಷ್ಟ್ರೀಯ ಸಮ್ಮೇಳನ ದೃಷ್ಟಿ-2025 ಆಗಸ್ಟ್ 9 ಶನಿವಾರ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಲಿದೆ.
ಪ್ರಪಂಚದಾದ್ಯಂತ ಶಿಕ್ಷಣ ತಜ್ಞರು, ಸಂಶೋಧಕರು ವಿದ್ಯಾರ್ಥಿಗಳು ಮತ್ತು ಉದ್ಯಮ ಕ್ಷೇತ್ರದ ತಜ್ಞರನ್ನು ಒಟ್ಟುಗೂಡಿಸಿ, ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲುವ, ಚರ್ಚೆ ಹಾಗೂ ವಿಚಾರ ವಿನಿಮಯವನ್ನು ನಡೆಸುವ ಉದ್ದೇಶದಿಂದ ಇದನ್ನು ಸಂಘಟಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 280ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ಪ್ರಸ್ತುತಿಗಾಗಿ ಸ್ವೀಕರಿಸಲಾಗಿದೆ.
ಅಂದು ಬೆಳಿಗ್ಗೆ 9.15ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು ಕೆನರಾ ಬ್ಯಾಂಕಿನ ಪುತ್ತೂರು ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗ್ಲೋಬಲ್ ಡಿಗ್ರೀಸ್ ಮಣಿಪಾಲ್ ಇದರ ಶಾಖಾ ನಿರ್ದೇಶಕ ಶಿಜೋ ಮೋನ್ ಯೇಸುದಾಸ್, ಮೆನೇಜ್ಮೆಂಟ್ ಯುನಿವರ್ಸಿಟಿ ಆಫ್ ಆಫ್ರಿಕಾ, ಕೆನ್ಯಾ ಇದರ ಪ್ರಾಂಶುಪಾಲ ಡಾ.ನ್ಯಾಗಾ ಜಸ್ಟರ್, ಐಐಐಟಿ ಧಾರವಾಡ ಇದರ ಅಸೋಸಿಯೇಟ್ ಪ್ರೊಫೆಸರ್ ಡಾ.ರಾಜೇಂದ್ರ ಹೆಗಡಿ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಆಧ್ಯಕ್ಷ ಕೆ.ವಿಶ್ವಾಸ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ.
ಅಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭವು ನಡೆಯಲಿದ್ದು ಎನ್‍ಎಂಎಎಂಐಟಿ ನಿಟ್ಟೆ ಇಲ್ಲಿನ ಪ್ರೊಫೆಸರ್ ಹಾಗೂ ಹಿರಿಯ ಐಇಇಇ ಸದಸ್ಯ ಡಾ.ವಾಸುದೇವ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್.ಬಿ ಅಧ್ಯಕ್ಷತೆ ವಹಿಸುತ್ತಾರೆ.
ಸಮ್ಮೇಳನದ ಯಶಸ್ಸಿಗಾಗಿ ಸಂಯೋಜಕ ಡಾ.ರಾಬಿನ್ ಮನೋಹರ್ ಶಿಂಧೆ, ಸಹ-ಸಂಯೋಜಕಿ ಡಾ.ಜ್ಯೋತಿಮಣಿ.ಕೆ ಹಾಗೂ ಎಂಬಿಎ ಮತ್ತು ಎಂಸಿಎ ವಿಭಾಗದ ಉಪನ್ಯಾಸಕರ ತಂಡವು ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.