ವಿಶ್ವವಿದ್ಯಾ ಸಂವಾದ- ವಿಷ್ಣುಗುಪ್ತ ವಿ.ವಿ.ಯಲ್ಲಿ ದೇಶೀಯ ಶಿಕ್ಷಣ:ರಾಘವೇಶ್ವರ ಶ್ರೀ…

ಮಂಗಳೂರು: ಗೋಕರ್ಣದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ದೇಸಿ ವಿದ್ಯೆಗಳ ಸಮಗ್ರ ಶಿಕ್ಷಣ ವ್ಯವಸ್ಥೆ ಕಲಿಸುತ್ತೇವೆ. ಭಾರತೀಯ 18 ವಿದ್ಯೆಗಳು ಮತ್ತು 64 ಕಲೆಗಳನ್ನು ಕೇಂದ್ರೀಕರಿಸಿ ಪಠ್ಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ಗೋಕರ್ಣ ಅಶೋಕಾವನದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ನಗರದ ಪುರಭವನದಲ್ಲಿ ಫೆ.16 ರಂದು ನಡೆದ ವಿಶ್ವವಿದ್ಯಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಷ್ಣುಗುಪ್ತ ವಿ.ವಿ. ಮೊದಲದಿನ ದಿಂದಲೇ ಜ್ಞಾನದ ಜತೆ ನಿಷ್ಠೆಯನ್ನು ನೀಡುವ ಕೆಲಸ ಮಾಡುತ್ತದೆ. ದೇಶನಿಷ್ಠೆ, ಧರ್ಮಶೀಲನಾಗಬೇಕು ಎನ್ನುವ ಕಲ್ಪನೆಯಲ್ಲಿ ವಿಷ್ಣುಗುಪ್ತ ವಿ.ವಿ. ಕೆಲಸ ಮಾಡಲಿದೆ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಎ.26ರಿಂದ ತರಗತಿಗಳು ಆರಂಭವಾಗಲಿವೆ. ಮಾರ್ಚ್ ಮೊದಲ ವಾರದಲ್ಲಿ ದಾಖಲಾತಿಗಳು ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ಎರಡು ವರ್ಷಗಳ ತರಗತಿ ಆರಂಭವಾಗುತ್ತದೆ. ಸಮಸ್ತ ಭಾರತ, ಭಾರತೀಯ ವಿದ್ಯೆಗಳನ್ನು ಪರಿಚಯ ಮಾಡುವ ಪಠ್ಯವಿರುತ್ತದೆ. ಭಾಷಾ ಮಾಧ್ಯಮವಾಗಿ ಸಂಸ್ಕೃತ ಇರುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಜ್ಞಾನದ ಕಡೆಗೆ ಹೋಗಲು ಸಾಧನೆ ಮುಖ್ಯ. ಈ ಹಿಂದೆ ವೈಭವದ ಕಾಲಘಟ್ಟ ಇತ್ತು. ಸಾವಿರಾರು ವರ್ಷದಲ್ಲಿ ಅದು ಇಳಿಮುಖವಾಗುತ್ತಾ ಬಂತು. ಈಗ ವೈಭವದ ಕಾಲಘಟ್ಟ ನಿರ್ಮಾಣ ಮಾಡುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಭಟ್ ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ವಿಹಿಂಪ ಪ್ರಮುಖರಾದ ಎಂ.ಬಿ. ಪುರಾಣಿಕ್, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಕಟೀಲು ದೇವಸ್ಥಾನದ ವಾಸುದೇವ ಆಸ್ರಣ್ಣ ಮೊದಲಾದವರು ಭಾಗವಹಿಸಿದ್ದರು.