ಸುದ್ದಿ

ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಪತ್ರಕರ್ತರ 35ನೇ ಸಮ್ಮೇಳನ….

ಮಂಗಳೂರು: ಮಂಗಳೂರಿನ ಪುರಭವನದಲ್ಲಿ ಮಾ.7 ಮತ್ತು 8ರಂದು ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ 2020 ನಡೆಯಲಿದ್ದು, ಇದು ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಆಶ್ರಯದಲ್ಲಿ ನಡೆಯಲಿರುವ ಮೊದಲ ಸಮ್ಮೇಳನವಾಗಿದೆ.

ಮಂಗಳೂರು ನಗರವು ಕನ್ನಡ ಪತ್ರಿಕೋದ್ಯಮದ ತವರೂರು. ಪತ್ರಿಕಾ ರಂಗಕ್ಕೆ ಸಂಬಂಧಿಸಿದಂತೆ ಅನೇಕ ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಮೂಡಿಸಿದ ನಗರ. 177 ವರ್ಷಗಳ ಹಿಂದೆ ಈ ಊರಿನಲ್ಲಿಯೇ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಹುಟ್ಟಿತು. ಇಲ್ಲಿ ಶುರುವಾದ ಕನ್ನಡ ಪತ್ರಿಕೋದ್ಯಮ ಆಂದೋಲನ ಕನ್ನಡ ನಾಡಿನಾದ್ಯಂತ ವ್ಯಾಪಿಸಿತ್ತು.

ಆ ದಿನಗಳಲ್ಲೇ ಅಸಂಘಟಿತರಾಗಿದ್ದ ಪತ್ರಕರ್ತರು ಸಂಘಟಿತರಾಗತೊಡಗಿದ್ದರು. ಈ ಆಶಯಗಳಿಗೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಬೆನ್ನೆಲುಬಾಗಿ ನಿಂತರು. ಹೀಗಾಗಿ 1932ರಲ್ಲಿ ಮೈಸೂರು ಪತ್ರಕರ್ತರ ಸಂಘ ಬೆಂಗಳೂರಿನಲ್ಲಿ ಹುಟ್ಟು ಪಡೆಯಿತು. ಈ ಸಂಘಕ್ಕೆ ಆಗ ಪತ್ರಕರ್ತರೂ ಆಗಿದ್ದ ಸಾಹಿತಿ ಡಿ.ವಿ.ಗುಂಡಪ್ಪ ಅವರು ಮೊದಲ ಸ್ಥಾಪಕ ಅಧ್ಯಕ್ಷರು.

ಇದೀಗ ಕೆಯುಡಬ್ಲ್ಯೂಜೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು ಹೊಂದಿರುವ ಮತ್ತು ಏಳು ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿರುವ ಪತ್ರಕರ್ತ ಸಮುದಾಯದ ಏಕೈಕ ಸಂಘಟನೆಯಾಗಿದೆ. 1976, ಅಕ್ಟೋಬರ್ 6ರಂದು ಉದಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೀಗ ನಿರಂತರ ರಚನಾತ್ಮಕ ಚಟುವಟಿಕೆಗಳ ಆಗರದಂತಿದೆ. ಈಗಾಗಲೇ ದೇಶದಲ್ಲೇ ಅಭೂತಪೂರ್ವ ಎನಿಸಿದ ಎರಡು ಗ್ರಾಮ ವಾಸ್ತವ್ಯ ಕಾರ್ಯಗಳಿಂದ ಮನೆ ಮಾತಾಗಿದೆ.

2019ರ ಜುಲೈ 1ರಂದು ಮಂಗಳೂರಿನಲ್ಲಿ ಮೊಟ್ಟ ಮೊದಲ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಸಂಘಟಿಸಿತ್ತು. ಇದೀಗ ಕರಾವಳಿಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ವತಿಯಿಂದ ನಡೆಯಲಿರುವ ರಾಜ್ಯ ಸಮ್ಮೇಳನಕ್ಕೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆತಿಥ್ಯ ವಹಿಸಿಕೊಂಡಿದೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮೇಳನದ ವೆಬ್‍ಸೈಟ್‍ನ್ನು ಅನಾವರಣಗೊಳಿಸಿ ಸಮ್ಮೇಳನದ ತಯಾರಿಗೆ ಚಾಲನೆ ನೀಡಿದ್ದಾರೆ.

ಈಗಾಗಲೇ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸದಸ್ಯರ ನೋಂದಣಿ ಪ್ರಕ್ರಿಯೆ ವೆಬ್‍ಸೈಟ್ ಮೂಲಕ ಆರಂಭಗೊಂಡಿದೆ. ಸಮ್ಮೇಳನದ ತಯಾರಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ ವೈ ಹಾಗೂ ಯು.ಟಿ. ಖಾದರ್ ಸಮ್ಮೇಳನದ ತಯಾರಿಗೆ ಕೈ ಜೋಡಿಸಿದ್ದಾರೆ.

ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ದೇಶದ ವಿವಿಧ ರಾಜ್ಯಗಳ ಮತ್ತು ವಿದೇಶದ ಪತ್ರಕರ್ತರು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ .

ಸಮ್ಮೇಳನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸಾನಿಧ್ಯದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್, ಸಚಿವರು ಸೇರಿದಂತೆ ಪತ್ರಿಕೋದ್ಯಮ ದಿಗ್ಗಜರು, ಸಾಧಕರು, ಸಂಪಾದಕರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳನ್ನು ಪತ್ರಕರ್ತರಿಗೆ ಪ್ರದಾನ ಮಾಡಲಾಗುವುದು. ಸಾಧಕ ಪತ್ರಕರ್ತರನ್ನು ಸನ್ಮಾನ ಮಾಡಲಾಗುವುದು. ಎರಡೂ ದಿನಗಳು ಪತ್ರಕರ್ತರು, ಮಾಧ್ಯಮ ಸಾಧಕ-ಬಾದಕಗಳ ಬಗ್ಗೆ, ಕರಾವಳಿ ಜಿಲ್ಲೆ ಅಭಿವೃದ್ಧಿ ಬಗ್ಗೆ ವಿಚಾರ ಗೋಷ್ಠಿಗಳು ನಡೆಯಲಿವೆ.

Advertisement

Related Articles

Leave a Reply

Your email address will not be published. Required fields are marked *

Back to top button