ಬಂಟ್ವಾಳ – ಮುನ್ನಲಾಯಿಪದವಿನಲ್ಲಿ ಮನೆ ಬೆಂಕಿಗಾಹುತಿ,ಲಕ್ಷಾಂತರ ರೂ.ನಷ್ಟ…
ಬಂಟ್ವಾಳ: ಸರಪಾಡಿ ಗ್ರಾಮದ ಮುನ್ನಲಾಯಿಪದವು ಎಂಬಲ್ಲಿ ವಸಂತಿ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದ್ದು,ಲಕ್ಷಾಂತರ ರೂ.ನಷ್ಟ ಉಂಟಾಗಿದೆ.
ವಸಂತಿ ಹಾಗೂ ಅವರ ಮನೆಮಂದಿ ಶನಿವಾರದಂದು ಸುಳ್ಯಕ್ಕೆ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಸೋಮವಾರ ಮುಂಜಾನೆಯ ವೇಳೆಗೆ ಮನೆಯ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮನೆಯತ್ತ ತೆರಳಿದಾಗ ಮನೆಯೊಳಗೆ ಸಾಮಾಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ವಸಂತಿಯವರಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದರು. ಸ್ಥಳಕ್ಕಾಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಮನೆಯಲ್ಲಿ ವಸಂತಿ ಹಾಗೂ ಅವರ ಮಗಳು, ಆಳಿಯ ಮತ್ತು ಮೊಮ್ಮಕ್ಕಳು ವಾಸಿಸುತ್ತಿದ್ದು,ಮಕ್ಕಳ ಶಾಲಾ ಪುಸ್ತಕ,ಬಟ್ಟೆ ಬರೆ ,ಮನೆಯ ದಾಖಲೆ ಪತ್ರಗಳು, ಧವಸಧಾನ್ಯ, ಹಂಚಿನ ಮೇಲ್ಛಾವಣಿ ಸಹಿತ ಇನ್ನಿತರ ಸೊತ್ತುಗಳು ಬೆಂಕಿಗಾಹುತಿಯಾಗಿದೆ. ವಸಂತಿಯವರು ಹೊಸಮನೆ ನಿರ್ಮಿಸಲು ಮರಮಟ್ಟುಗಳನ್ನು ಸಂಗ್ರಹಿಸಿಟ್ಟಿದ್ದು,ಎಲ್ಲವು ಸುಟ್ಟು ಭಸ್ಮವಾಗಿದೆ. ಸುದ್ದಿ ತಿಳಿದ ಸರಪಾಡಿ ಗ್ರಾ.ಪಂ ನ ಆಡಳಿತಾಧಿಕಾರಿ ಪುಷ್ಪರಾಜ್, ಪಿಡಿಒ ಸಿಲ್ವಿಯಾ ಫೆರ್ನಾಂಡಿಸ್,ಗ್ರಾಮಕರಣಿಕ ಚೆನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ಮಾಹಿತಿ ಪಡೆದಾಕ್ಷಣ ವಸಂತಿಯವರು ಸುಳ್ಯದಿಂದ ವಾಪಾಸ್ ಬಂದಿದ್ದಾರೆ.ಬೆಂಕಿ ಅವಘಡಕ್ಕೆ ಸದ್ಯ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.