ಡಿಸೆಂಬರ್ ಅಂತ್ಯದವರೆಗೆ ಶಾಲಾ ಕಾಲೇಜು ಆರಂಭ ಇಲ್ಲ – ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟನೆ…
ಬೆಂಗಳೂರು: ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ವರದಿಯನ್ನು ಆಧರಿಸಿ, ಡಿಸೆಂಬರ್ ಅಂತ್ಯದವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಚಳಿಗಾಲದ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಮಿತಿ ವರದಿ ನೀಡಿದೆ. ಹಾಗೂ ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೋವಿಡ್ 19 ಎರಡನೆ ಅಲೆ ಕಂಡುಬರುವ ಸಾಧ್ಯತೆ ಇರುವುದರಿಂದ ಶಾಲಾ ಕಾಲೇಜುಗಳನ್ನು ಆರಂಭಿಸದೆ ಪ್ರಸ್ತುತ ಇರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಲಾಗಿದೆ.ಡಿಸೆಂಬರ್ ಮೂರನೆ ವಾರ ಮತ್ತೊಮ್ಮೆ ಸಭೆ ಸೇರಿ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆಗಳ ಅಭಿಪ್ರಾಯಗಳನ್ನು ಪಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನರಾರಂಭಿಸುವುದು ಸೂಕ್ತವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ, ಗ್ರಾಮೀಣಾಭಿವೃದ್ದಿ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚೆರ್ಚೆ ನಡೆಸಲಾಗಿದ್ದು, ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಮಿತಿ ನೀಡಿರುವ ವರದಿಯನ್ನು ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.