`ಮರಳು ನಿಷೇಧ-ಎತ್ತಿನಹೊಳೆ-ರೆಸಾರ್ಟ್ ನಿರ್ಮಾಣ’ನೆರೆ ಅನಾಹುತಕ್ಕೆ ಮೂಲ ಕಾರಣ-ರೈತಸಂಘ ಆರೋಪ…..
ಪುತ್ತೂರು : ತಲೆಕಟ್ಟಿರುವ ಮಂದಿ ನೀಡಿರುವ ಅವೈಜ್ಞಾನಿಕ ವರದಿಯನ್ನಾಧರಿಸಿಕೊಂಡು ಅಧಿಕಾರಿಗಳು ನದಿಗಳಿಂದ ಮರಳು ತೆಗೆಯಬಾರದು ಎಂಬ ಆದೇಶ ಮಾಡಿರುವುದು. ಎತ್ತಿನ ಹೊಳೆ ಯೋಜನೆ, ಅರಣ್ಯ ಪ್ರದೇಶದಲ್ಲಿ ರೆಸಾರ್ಟ್‍ಗಳ ಸ್ಥಾಪನೆ ನಡೆಸಿರುವುದೇ ರಾಜ್ಯದಲ್ಲಿ ಉಂಟಾದ ನೆರೆ ಅನಾಹುತಗಳಿಗೆ ಮೂಲ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಅವರು ಆರೋಪಿಸಿದರು.
ಭೀಕರ ನೆರೆ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ ಸಂತ್ರಸ್ತ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ಇಲ್ಲಿನ ಮಿನಿವಿಧಾನಸೌಧದ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.ನದಿಗಳಿಂದ ಮರುಳು ತೆಗೆಯುವ ನಿಷೇಧ ಕೈಬಿಡಬೇಕು. ಕಳೆದ ವರ್ಷದ ಅಡಕೆ ಕೊಳೆರೋಗ ಪರಿಹಾರಕ್ಕೆ ಜಿಲ್ಲೆಯಲ್ಲಿ 56ಸಾವಿರಕ್ಕೂ ಅಧಿಕ ಮಂದಿ ಕೃಷಿಕರು ಅರ್ಜಿ ಸಲ್ಲಿಸಿದ್ದರು. ಆದರೆ ಶೇ.50ರಷ್ಟು ಕೂಡ ಪರಿಹಾರ ಒದಗಿಸುವ ಕೆಲಸ ಆಗಿಲ್ಲ, ಈ ಬಾರಿಯೂ ಕೊಳೆರೋಗದಿಂದ ನಷ್ಟಕ್ಕೊಳಗಾದ ರೈತರಿಗೆ ಸಮರ್ಪಕವಾದ ಪರಿಹಾರ ನೀಡಬೇಕು. ವರ್ಗದಾರರಿಗೆ ಕುಮ್ಕಿ ಭೂಮಿ ಹಕ್ಕು ನೀಡಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಅವರು ಮಾತನಾಡಿ, ಕಳೆದ 30 ವರ್ಷಗಳಿಂದ ನೆರೆ ಪ್ರಕೃತಿ ವಿಕೋಪ ಸಮಸ್ಯೆಗಾಗುತ್ತಿದೆ. ಆದರೆ ಇದಕ್ಕೆ ವೈಜ್ಞಾನಿಕ ಕಾರಣಗಳೇನು ಎಂದು ತಿಳಿದುಕೊಳ್ಳುವ ಕೆಲಸವಾಗದ ಕಾರಣ ಇಂದು ಗಂಭೀರ ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ರಾಜ್ಯ ಸರ್ಕಾರ ಕುರ್ಚಿ ಹೋರಾಟದಲ್ಲಿ ತಲ್ಲೀನವಾಗಿದ್ದು, ಜನತೆಯ ಸಮಸ್ಯೆಯನ್ನು ಕೇಳುವವರಿಲ್ಲ. ಬ್ಯಾಂಕ್‍ಗಳ ವಿಲೀನದಿಂದಾಗಿ ನೌಕರರು ನೌಕರಿ ಕಳಕೊಂಡು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ. ರೈತರು ದಂಧೆ ಏಳುವ ಸ್ಥಿತಿ ನಿರ್ಮಾಣವಾಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ರಾಜ್ಯ ರೈತಸಂಘ ಹಸಿರುಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್.ಈಶ್ವರ ಭಟ್ ಮತ್ತು ಹೊನ್ನಪ್ಪ ಗೌಡ, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಕಡಬ ವಲಯದ ಅಧ್ಯಕ್ಷ ವಿಕ್ಟರ್ ಡಿ.ಸೋಜಾ, ವಿಟ್ಲ ವಲಯದ ಕಾರ್ಯದರ್ಶಿ ಸುದೇಶ್ ಭಂಡಾರಿ ಮತ್ತಿತರರು ಇದ್ದರು. ಪ್ರತಿಭಟನೆಯ ಬಳಿಕ ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರ ಮೂಲಕ ಪ್ರಧಾನಿಗೆ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.