ಹೆಚ್‍ಐವಿ, ಏಡ್ಸ್ ಜಾಗೃತಿ ಕಾರ್ಯಕ್ರಮ….
ಪುತ್ತೂರು: ಹೆಚ್‍ಐವಿ ಸೋಂಕು ಒಂದೊಮ್ಮೆ ದೇಹಕ್ಕೆ ಬಾಧಿಸಿದರೆ ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಇದರ ತಡೆಗೆ ಎಚ್ಚರಿಕೆ ಮತ್ತು ಜಾಗೃತಿಯೊಂದೇ ಪರಿಹಾರವಾಗಿದೆ. ಈ ಬಗ್ಗೆ ಸಮುದಾಯ ಒಟ್ಟಾಗಿ ಎಲ್ಲಾ ಕಡೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯ ಡಿಸಿಟಿಸಿ ಆಪ್ತ ಸಮಾಲೋಚಕ ತಾರಾನಾಥ್ ಹೇಳಿದರು.
ಅವರು ಬುಧವಾರ ಪುತ್ತೂರಿನ ಬ್ರೈಟ್ ಹೆಲ್ತ್ ಕೇರ್ ಇನ್ಸ್‍ಟ್ಯೂಟ್ & ಪ್ಯಾರಾ ಮೆಡಿಕಲ್ ಸೈನ್ಸ್ ಇದರ ವತಿಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ನಡೆದ ಹೆಚ್‍ಐವಿ, ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಪಾಲಿಗೆ ಮಾರಕವಾದ ಕಾಯಿಲೆ ಏಡ್ಸ್. ಇದು ಬಹುತೇಕ ಸ್ವಯಾರ್ಜಿತವಾಗಿದೆ. ಇದರ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಎಚ್ಚರಿಕೆ ವಹಿಸಬೇಕು. ಹಿಂದಿನ ದಿನಗಳಿಗೆ ಹೋಲಿಸಿದರೆ ಇದೀಗ ಏಡ್ಸ್ ರೋಗಿಗಳ ಪ್ರಕರಣ ಕಡಿಮೆಯಾಗಿದೆ. ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ಏಡ್ಸ್ ರೋಗವನ್ನು ವಾಸಿಮಾಡುವ ಔಷಧಿ ಈತನಕ ಬಂದಿಲ್ಲ. ಜೀವಿತಾವಧಿಯನ್ನು ಮುಂದೂಡುವ ಚಿಕಿತ್ಸೆಯನ್ನು ಮಾತ್ರ ನೀಡಲು ಸಾಧ್ಯವಿದೆ. ಕೆಲವರು ಏಡ್ಸ್ ಗುಣಪಡಿಸುವ ಔಷಧಿ ನೀಡುತ್ತೇವೆ ಎಂದು ಸುಳ್ಳು ಹೇಳಿ ರೋಗಿಗಳನ್ನು ವಂಚಿಸುತ್ತಿದ್ದಾರೆ. ಅದೆಲ್ಲಾ ಸಾಧ್ಯವಿಲ್ಲ. ಏಡ್ಸ್ ಕಾಯಿಲೆ ನಿಯಂತ್ರಣಕ್ಕೆ ಜಾಗೃತಿ ಒಂದೇ ಪರಿಹಾರವಾಗಿದೆ ಎಂದರು.
ಚೇತನಾ ಆಸ್ಪತ್ರೆಯ ಬಳಿಯ ಬ್ರೈಟ್ ಹೆಲ್ತ್ ಕೇರ್ ಸೆಂಟರ್ ಬಳಿಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆ ತನಕ ಘೋಷಣೆ ಫಲಕದೊಂದಿಗೆ ಪಾದಯಾತ್ರೆ ನಡೆಸಿದ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಾದ ಅಕಿಫಾ, ಸುರೈಯಾ, ಬುಶ್ರಾ, ಹಫೀಜಾ ಏಡ್ಸ್ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕರಾದ ಬುಶ್ರಾ, ಪುಷ್ಪಲತಾ, ಅನುಷಾ, ಶ್ಯಾಮಲಾ, ರಷಿಕಾ, ರಫಿಯಾ, ಸಂಸ್ಥೆಯ ಆಡಳಿತ ನಿರ್ದೇಶಕ ಮಹಮ್ಮದ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು.