ರಾಷ್ಟ್ರ ಕವಿ ಕುವೆಂಪು ಮಾನವ ಸಮಾಜಕ್ಕೆ ದಾರಿ ದೀಪ- ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ಹಾಗೂ ತಾಲೂಕು ಆಡಳಿತ ವತಿಯಿಂದ ಸುಳ್ಯ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆಯಲ್ಲಿ ಟಿ. ಎಂ ಶಾಹೀದ್ ತೆಕ್ಕಿಲ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಅವರು ಭಾಗವಹಿಸಿದರು.
ದೀಪ ಬೆಳಗಿಸಿ ಕುವೆಂಪು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅವರು ಕುವೆಂಪುರವರು ಈ ರಾಷ್ಟ್ರಕ್ಕೆ ಕನ್ನಡ ನಾಡಿಗೆ ಅಪಾರ ಕೊಡುಗೆಗಳನ್ನು ನೀಡಿದ್ದು, ಕನ್ನಡದಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಯ ರಚನೆ ಮತ್ತೆ ಕರ್ನಾಟಕಕ್ಕೆ ನಾಡಗೀತೆಯನ್ನು ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ರಚಿಸುವ ಮೂಲಕ ಕನ್ನಡವನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಲಿತು ಅಲ್ಲೆ ಪ್ರಾಂಶುಪಾಲರಾಗಿ ಮುಂದೆ ಅದೇ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು ಇಂದು ಅವರ ಹುಟ್ಟಿದ ದಿನ ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಅವರು ಮಾನವ ಕುಲಕ್ಕೆ ನೀಡಿದ ಸಂದೇಶವನ್ನು ಎತ್ತಿ ಹಿಡಿದಿದೆ. ಕುವೆಂಪುರವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಕರ್ನಾಟಕದ ಪ್ರಥಮ ಜ್ಞಾನಪೀಠ ಪ್ರಶಸ್ತಿ ವಿಜೇತ, ಪದ್ಮವಿಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ದೊರಕಿರುವುದು ಸಾಹಿತ್ಯ ಲೋಕಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಂಜುಳಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ತಿಕ್ ಸ್ವಾಗತಿಸಿ, ತಿಪ್ಪೇಶ್ ವಂದನಾರ್ಪಣೆ ಮಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಸಹಿತ ಹಲವರು ಪುಷ್ಪಾರ್ಚನೆ ಮಾಡಿದರು.







